ಅತ್ಯಾಚಾರದ ನಂತರ ವಿವಾಹವಾಗಲು ಸಮ್ಮತಿ: ಶಿಕ್ಷೆಯನ್ನು ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ವಿವಾಹವಾಗುತ್ತೇನೆ ಎಂದು ಸುಳ್ಳು ಭರವಸೆ ನೀಡಿ, ಅತ್ಯಾಚಾರವೆಸಗಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ ಓರ್ವ ಅತ್ಯಾಚಾರಿ ಹಾಗೂ ಆತನಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯು ವಿವಾಹವಾಗಲು ಪರಸ್ಪರ ಸಮ್ಮತಿಸಿದ್ದರಿಂದ, ಅಪರಾಧಿ ಯುವಕನ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಅಮಾನತುಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ವಿ.ವಿ.ನಾಗರತ್ನ ಹಾಗೂ ನ್ಯಾ. ಸತೀಶ್ ಚಂದ್ರರನ್ನೊಳಗೊಂಡ ನ್ಯಾಯಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಆ ಬಳಿಕ ನ್ಯಾಯಾಲಯದ ಕೊಠಡಿಯಲ್ಲಿ ಪರಸ್ಪರ ಪುಷ್ಪ ವಿನಿಮಯ ಮಾಡಿಕೊಳ್ಳುವಂತೆ ಇಬ್ಬರಿಗೂ ಸೂಚಿಸಿದ ಅಪರೂಪದ ಘಟನೆ ನಡೆದಿದೆ ಎಂದು barandbench.com ವರದಿ ಮಾಡಿದೆ.
"ನಾವು ಇಬ್ಬರೂ ಕಕ್ಷಿದಾರರನ್ನು ಭೋಜನ ವಿರಾಮದ ವೇಳೆ ಚೇಂಬರ್‌ನಲ್ಲಿ ಭೇಟಿಯಾದೆವು. ಇಬ್ಬರೂ ಪರಸ್ಪರ ವಿವಾಹವಾಗುವ ಬಯಕೆಯನ್ನು ಒಮ್ಮತದಿಂದ ವ್ಯಕ್ತಪಡಿಸಿದರು" ಎಂದು ಸಂತ್ರಸ್ತೆಗೆ ವಿವಾಹದ ಪ್ರಸ್ತಾವನೆ ಸಲ್ಲಿಸುವಂತೆ ಅತ್ಯಾಚಾರದ ದೋಷಿಗೆ ಸೂಚಿಸುವುದಕ್ಕೂ ಮುನ್ನ ಹೇಳಿತು.
ನಂತರ, ಅಪರಾಧಿ ಎಂದು ಘೋಷಿತನಾಗಿದ್ದ ವ್ಯಕ್ತಿಯ ಶಿಕ್ಷೆಯನ್ನು ಅಮಾನತುಗೊಳಿಸಿ, "ಅತ್ಯಾಚಾರದ ಆರೋಪಿ ಹಾಗೂ ಸಂತ್ರಸ್ತೆಯು ಪರಸ್ಪರ ವಿವಾಹವಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ವಿವಾಹದ ವಿವರಗಳನ್ನು ಇಬ್ಬರ ಪೋಷಕರೂ ನಿಗದಿಮಾಡಿಕೊಳ್ಳಬೇಕು. ಈ ವಿವಾಹವು ಎಷ್ಟು ಶೀಘ್ರದಲ್ಲಿ ಸಾಧ್ಯವೊ, ಅಷ್ಟು ಶೀಘ್ರವಾಗಿ ನೆರವೇರಬೇಕು ಎಂದು ನಾವು ಬಯಸುತ್ತೇವೆ. ಇಂತಹ ಸನ್ನಿವೇಶದಲ್ಲಿ ನಾವು ಶಿಕ್ಷೆಯನ್ನು ಅಮಾನತುಗೊಳಿಸಿದ್ದು, ಅರ್ಜಿದಾರನನ್ನು ಬಿಡುಗಡೆಗೊಳಿಸಿದ್ದೇವೆ" ಎಂದು ನ್ಯಾಯಾಲಯ ಹೇಳಿತು.