ಪುಸ್ತಕದ ರಕ್ಷಾಪುಟದ ಮೇಲೆ ಅರುಂಧತಿ ರಾಯ್ ಧೂಮಪಾನದ ಚಿತ್ರವನ್ನು ಪ್ರಶ್ನಿಸಿದ್ದ ಅರ್ಜಿಗೆ ಸುಪ್ರೀಂ ತಿರಸ್ಕಾರ
ಅರುಂಧತಿ ರಾಯ್ | Photo Credit : @royarundhti
ಹೊಸದಿಲ್ಲಿ: ಖ್ಯಾತ ಲೇಖಕಿ ಅರುಂಧತಿ ರಾಯ್ ಅವರು ಧೂಮಪಾನ ಮಾಡುತ್ತಿರುವ ಚಿತ್ರವಿರುವ ರಕ್ಷಾಪುಟವನ್ನು ಹೊಂದಿರುವ ಅವರ ‘ಮದರ್ ಮೇರಿ ಕಮ್ಸ್ ಟು ಮಿ’ಕೃತಿಯ ಪ್ರಸಾರ ನಿಷೇಧವನ್ನು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕೇರಳ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.
ರಾಯ್ ಧೂಮಪಾನವನ್ನು ಉತ್ತೇಜಿಸಿಲ್ಲ ಅಥವಾ ಪ್ರಚಾರ ಮಾಡಿಲ್ಲ ಎನ್ನುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ.ಜಾಯಮಾಲ್ಯ ಬಾಗ್ಚಿ ಅವರ ಪೀಠವು,ಪುಸ್ತಕದ ವೀಕ್ಷಣೆಯು ಅದನ್ನು ಖರೀದಿಸುವವರಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿತು.
ಇಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಅದು ಸ್ಪಷ್ಟಪಡಿಸಿತು.
ರಾಯ್ ಅವರ ಕೃತಿಯು ಆ.28ರಂದು ಬಿಡುಗಡೆಗೊಂಡ ಬಳಿಕ ವಕೀಲರೋರ್ವರು,ಪುಸ್ತಕದ ರಕ್ಷಾಪುಟವು 2003ರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಹಾಗೂ ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ,ಪೂರೈಕೆ ಮತ್ತು ವಿತರಣೆ ಕಾಯ್ದೆ ಹಾಗೂ 2008ರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಾಖಲಿಸಿದ್ದರು.
ಧೂಮಪಾನದ ಎಲ್ಲ ಚಿತ್ರಗಳ ಮೇಲೆ ‘ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಅಥವಾ ‘ತಂಬಾಕು ಕ್ಯಾನ್ಸರ್‌ಗೆ ಕಾರಣವಾಗುತ್ತದೆ’ ಎಂಬ ಆರೋಗ್ಯ ಎಚ್ಚರಿಕೆಗಳನ್ನು ಮುದ್ರಿಸುವುದನ್ನು ಕಾಯ್ದೆಯು ಕಡ್ಡಾಯಗೊಳಿಸಿದೆ. ಪುಸ್ತಕದ ರಕ್ಷಾಪುಟದಲ್ಲಿ ಕಡ್ಡಾಯ ಎಚ್ಚರಿಕೆಯಿಲ್ಲ ಮತ್ತು ಇದು ತಂಬಾಕು ಉತ್ಪನ್ನಗಳ ಪರೋಕ್ಷ ಜಾಹೀರಾತಿಗೆ ಸಮನಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಅ.13ರಂದು ಅರ್ಜಿಯನ್ನು ವಜಾಗೊಳಿಸಿದ್ದ ಕೇರಳ ಉಚ್ಚ ನ್ಯಾಯಾಲಯವು,ಸ್ವಯಂಪ್ರಚಾರಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಿರುವಂತಿದೆ ಎಂದು ತನ್ನ ಆದೇಶದಲ್ಲಿ ಹೇಳಿತ್ತು.
ಪುಸ್ತಕದ ಪ್ರಕಾಶಕರಾದ ಪೆಂಗ್ವಿನ್ ಇಂಡಿಯಾ ಹಿಂಬದಿಯ ರಕ್ಷಾಪುಟದಲ್ಲಿ ಹಕ್ಕು ನಿರಾಕರಣೆಯನ್ನು ಮುದ್ರಿಸಿದ್ದನ್ನು ಗಮನಕ್ಕೆ ತೆಗೆದುಕೊಂಡಿದ್ದ ಉಚ್ಚ ನ್ಯಾಯಾಲಯವು, ಅರ್ಜಿದಾರರು ತನ್ನ ಅರ್ಜಿಯಲ್ಲಿ ಈ ಅಂಶವನ್ನು ಉಲ್ಲೇಖಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿತ್ತು.
ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಅರ್ಜಿದಾರರ ಪರ ವಕೀಲ ಗೋಪಾಲ ಕುಮಾರನ್ ಅವರು,ಯಾವುದೇ ಶಾಸನಬದ್ಧ ಎಚ್ಚರಿಕೆಗಳಿಲ್ಲದೆ ರಾಯ್ ಬೀಡಿ ಸೇದುತ್ತಿರುವುದನ್ನು ಪುಸ್ತಕದ ರಕ್ಷಾಪುಟವು ತೋರಿಸಿದೆ. ಅವರು ತಂಬಾಕನ್ನು ಸೇದುತ್ತಿದ್ದರೋ ಅಥವಾ ಗಾಂಜಾವನ್ನೋ ಅನ್ನುವುದು ಖಚಿತವಾಗಿಲ್ಲ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮು.ನ್ಯಾ.ಸೂರ್ಯಕಾಂತ ಅವರು,‘ರಾಯ್ ಪ್ರತಿಷ್ಠಿತ ಲೇಖಕಿಯಾಗಿದ್ದಾರೆ. ಪೆಂಗ್ವಿನ್ ಕೂಡ ಪ್ರಸಿದ್ಧ ಪ್ರಕಾಶನ ಸಂಸ್ಥೆಯಾಗಿದೆ. ರಾಯ್ ಅವರ ಸಾಹಿತ್ಯವು ಧೂಮಪಾನವನ್ನು ಉತ್ತೇಜಿಸುವಂತೆ ಕಾಣುತ್ತಿಲ್ಲ. ಅದು ನಿಮಗೆ ಏಕೆ ಸಮಸ್ಯೆಯಾಗಿದೆ? ಅನಗತ್ಯವಾಗಿ ಜನಪ್ರಿಯತೆಗಾಗಿ’ ಎಂದು ಹೇಳಿದ್ದರು.
ನಗರಗಳಾದ್ಯಂತ ದೊಡ್ಡ ಹೋರ್ಡಿಂಗ್‌ಗಳಲ್ಲಿ ಪುಸ್ತಕದ ರಕ್ಷಾಪುಟವನ್ನು ಜಾಹೀರಾತು ಮಾಡುತ್ತಿಲ್ಲ. ಓದುಗರು ಪುಸ್ತಕವನ್ನು ಅದರಲ್ಲಿಯ ವಿಷಯಗಳು ಮತ್ತು ಲೇಖಕರ ವಿಶ್ವಾಸಾರ್ಹತೆಯಿಂದಾಗಿ ಖರೀದಿಸುತ್ತಾರೆಯೇ ಹೊತು ಮುಖಪುಟದ ಚಿತ್ರವನ್ನು ನೋಡಿ ಅಲ್ಲ ಎಂದು ಹೇಳಿದರು.
ಪುಸ್ತಕದ ಹಿಂಭಾಗದಲ್ಲಿರುವ ಹಕ್ಕು ನಿರಾಕರಣೆಯನ್ನು ಸಣ್ಣ ಅಕ್ಷರಗಳಲ್ಲಿ ಮುದ್ರಿಸಲಾಗಿದೆ ಎಂದೂ ಅರ್ಜಿದಾರರ ಪರ ವಕೀಲರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮು.ನ್ಯಾ.ಸೂರ್ಯಕಾಂತ ಅವರು,ಪುಸ್ತಕವನ್ನು ಸಿಗರೇಟ್‌ನ ಪ್ರಚಾರಕ್ಕಾಗಿ ಬರೆಯಲಾಗಿಲ್ಲ ಮತ್ತು 2003ರ ಕಾಯ್ದೆಯಡಿ ಹಕ್ಕು ನಿರಾಕರಣೆ ಅಗತ್ಯವಿಲ್ಲ ಎಂದು ಹೇಳಿದರು.
ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತು.