ಹಾಶಿಂಪುರ ಹತ್ಯಾಕಾಂಡ ಪ್ರಕರಣ: ಮತ್ತಿಬ್ಬರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಜಾಮೀನು
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: 38 ಜನರನ್ನು ಹತ್ಯೆ ಮಾಡಿದ್ದ 1987ರ ಹಾಶಿಂಪುರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಇಬ್ಬರು ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಎಂಜಿ ಮಸಿಹ್ ಅವರ ಪೀಠವು ಆರೋಪಿಗಳಿಗೆ ಜಾಮೀನು ನೀಡಿದೆ.
ಅಪರಾಧಿ ಬುಧಿ ಸಿಂಗ್ ಪರ ವಕೀಲ ಅಮಿತ್ ಆನಂದ್ ತಿವಾರಿ ಕೋರ್ಟ್ ನಲ್ಲಿ ವಾದಿಸಿದ್ದು, ಅವರು ಇತರ ಅಪರಾಧಿಗಳಂತೆ ಆರು ವರ್ಷಗಳಿಂದ ಜೈಲಿನಲ್ಲಿದ್ದರು, ಸಮಾನತೆಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡುವಂತೆ ಕೋರ್ಟ್ ನಲ್ಲಿ ವಾದಿಸಿದ್ದರು. ಹಿರಿಯ ವಕೀಲ ಶದನ್ ಫರಾಸತ್ ಅವರು ಅಪರಾಧಿ ಬಸಂತ್ ಬಲ್ಲಭ್ ಪರ ವಾದಿಸಿದ್ದಾರೆ.
1987ರ ಹಾಶಿಂಪುರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿ ಡಿಸೆಂಬರ್ 6ರಂದು ಸಮಿ ಉಲ್ಲಾ, ನಿರಂಜನ್ ಲಾಲ್, ಮಹೇಶ್ ಪ್ರಸಾದ್ ಮತ್ತು ಜೈಪಾಲ್ ಸಿಂಗ್ ಸೇರಿದಂತೆ ಜಾಮೀನು ಅರ್ಜಿಗಳ ವಿಚಾರಣೆ ಬಾಕಿ ಇದ್ದ ಒಟ್ಟು 8 ಅಪರಾಧಿಗಳಿಗೆ ಡಿಸೆಂಬರ್ 6ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
1987ರ ಮೇ 22ರಂದು ಹಾಶಿಂಪುರ ಹತ್ಯಾಕಾಂಡ ನಡೆದಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿರುವ ಹಾಶಿಂಪುರದಿಂದ ಸರಿಸುಮಾರು 50 ಮುಸ್ಲಿಂ ಯುವಕರನ್ನು ಕೂಡಿಹಾಕಿ, ನಗರದ ಹೊರವಲಯಕ್ಕೆ ಕರೆದೊಯ್ದು, ಅವರ ಮೇಲೆ ಗುಂಡು ಹಾರಿಸಿ ಅವರ ಮೃತದೇಹವನ್ನು ಹತ್ತಿರದ ಕಾಲುವೆಗೆ ಎಸೆಯಲಾಗಿತ್ತು. ಕೆಲ ದಿನಗಳ ನಂತರ ನಾಲೆಯಲ್ಲಿ ಮೃತದೇಹಗಳು ತೇಲುತ್ತಿರುವುದು ಕಂಡು ಬಂದು ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಪ್ರಾಂತೀಯ ಸಶಸ್ತ್ರ ಪಡೆಯ 19 ಮಂದಿ ಸಿಬ್ಬಂದಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಮೇ 2000ರಲ್ಲಿ 19 ಆರೋಪಿಗಳಲ್ಲಿ 16 ಮಂದಿ ತಪ್ಪಿತಸ್ಥರೆಂದು ಘೋಷಿಸಲಾಗಿತ್ತು. ಉಳಿದ ಮೂವರು ಆರೋಪಿಗಳು ವಿಚಾರಣೆಯ ವೇಳೆ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸುರೇಶ್ ಚಂದ್ ಶರ್ಮಾ, ನಿರಂಜನ್ ಲಾಲ್, ಕಮಲ್ ಸಿಂಗ್, ರಾಮ್ ಬೀರ್ ಸಿಂಗ್, ಸಮಿ ಉಲ್ಲಾ, ಮಹೇಶ್ ಪ್ರಸಾದ್ ಸಿಂಗ್, ಜೈ ಪಾಲ್ ಸಿಂಗ್, ರಾಮ್ ಧಿಯಾನ್, ಅರುಣ್ ಕುಮಾರ್, ಲೀಲಾ ಧರ್ ಲೋಹ್ನಿ, ಹಮೀರ್ ಸಿಂಗ್, ಕುನ್ವರ್ ಪಾಲ್ ಸಿಂಗ್, ಬುದಾ ಸಿಂಗ್, ಬುಧಿ ಸಿಂಗ್ , ಮೊಹ್ಕಮ್ ಸಿಂಗ್ ಮತ್ತು ಬಸಂತ್ ಬಲ್ಲಭ್ ಗೆ ಶಿಕ್ಷೆ ವಿಧಿಸಲಾಗಿತ್ತು.
2002ರಲ್ಲಿ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಗಾಝಿಯಾಬಾದ್ ಜಿಲ್ಲಾ ನ್ಯಾಯಾಲಯದಿಂದ ದಿಲ್ಲಿಯ ಸೆಷೆನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಆದೇಶ ನೀಡಿತ್ತು. 2015ರ ಮಾ. 21ರಂದು 1987ರ ಹಾಶಿಂಪುರ ಹತ್ಯಾಕಾಂಡ ಪ್ರಕರಣದಲ್ಲಿ ಆರೋಪಿತರಾದ ಎಲ್ಲಾ 16 ಆರೋಪಿಗಳನ್ನು ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಧಾರದ ಕೊರತೆ ಕಾರಣ ನೀಡಿ ಖುಲಾಸೆಗೊಳಿಸಿತ್ತು. 2018ರ ಅಕ್ಟೋಬರ್ 31ರಂದು ದಿಲ್ಲಿ ಹೈಕೋರ್ಟ್ 16 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತ್ತು.