×
Ad

2020ರಲ್ಲಿ ನೀಡಿದ ತೀರ್ಪಿನಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಶ್ಲಾಘಿಸಿದ್ದ ಸುಪ್ರೀಂ ಕೋರ್ಟ್

Update: 2025-05-08 18:39 IST

Photo Credit: Shiv Kumar Pushpakar

ಹೊಸದಿಲ್ಲಿ : 2020ರಲ್ಲಿ ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ(ಪಿಸಿ) ನೀಡುವ ಕುರಿತ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್ 'ಆಪರೇಷನ್ ಸಿಂಧೂರ' ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಇಬ್ಬರು ಮಹಿಳಾ ಅಧಿಕಾರಿಗಳಲ್ಲಿ ಓರ್ವರಾದ ಕರ್ನಲ್ ಸೋಫಿಯಾ ಖುರೇಷಿ ಅವರ ಸಾಧನೆಗಳನ್ನು ಗುರುತಿಸಿ ಶ್ಲಾಘಿಸಿತ್ತು.

2020ರ ಫೆಬ್ರವರಿ 17ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಸಿಬ್ಬಂದಿ ನಿಯೋಜನೆಗಳನ್ನು ಹೊರತುಪಡಿಸಿ ಎಲ್ಲಾ ಹುದ್ದೆಗಳಿಂದ ಮಹಿಳೆಯರನ್ನು ಸಂಪೂರ್ಣವಾಗಿ ಹೊರಗಿಡುವುದು ಮತ್ತು ಕಮಾಂಡೊಗಳ ನೇಮಕಾತಿಗಳಿಗೆ ಮಹಿಳೆಯರನ್ನು ಪರಿಗಣಿಸದಿರುವುದು ಕಾನೂನಿನಲ್ಲಿ ಸಮರ್ಥನೀಯವಲ್ಲ ಎಂದು ಹೇಳಿತ್ತು.

ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಮಹಿಳಾ ಅಧಿಕಾರಿಗಳು ಸಾಧಿಸಿದ ಸಾಧನೆಗಳನ್ನು ಉಲ್ಲೇಖಿಸಿದ್ದ ಸುಪ್ರೀಂ ಕೋರ್ಟ್, ಕರ್ನಲ್ ಖುರೇಷಿ ಅವರ ಸಾಧನೆಗಳನ್ನು ಉದಾಹರಣೆಯನ್ನಾಗಿ ನೀಡಿತು.

ʼಭಾರತೀಯ ಸೇನೆಯ ಸಿಗ್ನಲ್ಸ್ ಕಾರ್ಪ್ಸ್‌ನ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ 'ಎಕ್ಸರ್ಸೈಸ್ ಫೋರ್ಸ್ 18' ಎಂಬ ಬಹುರಾಷ್ಟ್ರೀಯ ಮಿಲಿಟರಿ ಸಮರಾಭ್ಯಾಸದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳೆ. ಇದು ಭಾರತ ಆಯೋಜಿಸಿದ್ದ ಅತಿದೊಡ್ಡ ವಿದೇಶಿ ಮಿಲಿಟರಿ ಕವಾಯತು. ಅವರು 2006ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಅವರು ಕದನ ವಿರಾಮಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಮಾನವೀಯ ಚಟುವಟಿಕೆಗಳಿಗೆ ಸಹಾಯ ಮಾಡುವ ಉಸ್ತುವಾರಿ ವಹಿಸಿದ್ದರು. ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡುವುದು ಅವರ ಕೆಲಸದ ಭಾಗವಾಗಿತ್ತುʼ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಮೇ 7ರಂದು ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವಾಯುಪಡೆಯ (IAF) ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಭಾಗವಹಿಸಿದ್ದರು. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ದಾಳಿ ಬಗ್ಗೆ ಇಬ್ಬರು ಮಹಿಳಾ ಅಧಿಕಾರಿಗಳು ಜಗತ್ತಿಗೆ ಸಂದೇಶವನ್ನು ರವಾನಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News