ವಾಮಾಚಾರದ ಶಂಕೆ | 77ರ ವೃದ್ಧೆಯನ್ನು ಥಳಿಸಿ ಮೂತ್ರ ಕುಡಿಸಿ, ನಾಯಿ ಮಲ ತಿನ್ನಿಸಿದರು
ಸಾಂದರ್ಭಿಕ ಚಿತ್ರ
ಅಮರಾವತಿ: ವಾಮಾಚಾರ ನಡೆಸಿದ ಆರೋಪದಲ್ಲಿ 77ರ ಹರೆಯದ ಮಹಿಳೆಯನ್ನು ಥಳಿಸಿದ ಗುಂಪು ಬಲಬಂತದಿಂದ ಮೂತ್ರ ಕುಡಿಸಿದ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಚಿಖಲ್‌ದರ ತಾಲೂಕಿನ ರೆಟ್ಯಖೇಡಾ ಗ್ರಾಮದಲ್ಲಿ ನಡೆದಿದೆ.
ಡಿ.30ರಂದು ಈ ಘಟನೆ ನಡೆದಿದ್ದು, ಕೆಲಸಕ್ಕೆಂದು ಪರವೂರಿಗೆ ತೆರಳಿದ್ದ ಮಗ-ಸೊಸೆ ಜ.5ರಂದು ಮನೆಗೆ ವಾಪಸಾದಾಗ ಈ ಅಮಾನವೀಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪೋಲಿಸ್ ದೂರನ್ನು ಸಲ್ಲಿಸಿರುವ ಅವರು,ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಸಂತ್ರಸ್ತೆಗೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ನೆರೆಕರೆಯವರ ಗುಂಪು ಮಹಿಳೆಯ ನುಗ್ಗಿ ವಾಮಾಚಾರದ ಆರೋಪ ಹೊರಿಸಿ ಹಲ್ಲೆ ನಡೆಸಿದಾಗ ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು. ಆಕೆಯನ್ನು ದೊಣ್ಣೆಗಳಿಂದ ಥಳಿಸಿ ಕಪಾಳಮೋಕ್ಷ ಮಾಡಿದ ಗುಂಪು ಕೈಕಾಲುಗಳಿಗೆ ಕಾದ ಕಬ್ಬಿಣದ ಸಲಾಕೆಗಳಿಂದ ಬರೆಗಳನ್ನು ಹಾಕಿದೆ. ಬಲವಂತದಿಂದ ಮೂತ್ರವನ್ನು ಕುಡಿಸಿ ನಾಯಿಯ ಮಲವನ್ನು ತಿನ್ನಿಸಿದ್ದಲ್ಲದೆ, ಕುತ್ತಿಗೆಗೆ ಚಪ್ಪಲಿಗಳ ಹಾರ ತೊಡಿಸಿ ಊರೆಲ್ಲ ಮೆರವಣಿಗೆ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೋಲಿಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ದೂರನ್ನು ಮುಚ್ಚಿ ಹಾಕಲು ಸ್ಥಳೀಯ ಅಧಿಕಾರಿಗಳು ಪ್ರಯತ್ನಿಸಿದ್ದರೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅಮರಾವತಿ ಎಸ್‌ಪಿ ವಿಶಾಲ ಆನಂದ ತಿಳಿಸಿದರು.