ಕೇರಳದ ಕಣ್ಣೂರಿನಲ್ಲಿ ಹಂದಿ ಜ್ವರ ಪತ್ತೆ; ಹಂದಿಗಳ ಹತ್ಯೆಗೆ ಜಿಲ್ಲಾಧಿಕಾರಿ ಆದೇಶ
ಸಾಂದರ್ಭಿಕ ಚಿತ್ರ.| Photo: PTI
ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯ ಕನಿಚಾರ್ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ವರದಿಯಾಗಿದ್ದು, ಇಲ್ಲಿನ ಎರಡು ಫಾರ್ಮ್‌ಗಳಲ್ಲಿರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮಲೆಯಂಪಾಡಿಯಲ್ಲಿನ ಫಾರ್ಮ್ ಒಂದರಲ್ಲಿ ಹಂದಿ ಜ್ವರ ಪತ್ತೆಯಾಗಿರುವುದನ್ನು ಶುಕ್ರವಾರ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದಾದ ಬಳಿಕ ಅಲ್ಲಿಂದ 10 ಕಿಮೀ ದೂರದಲ್ಲಿರುವ ಮತ್ತೊಂದು ಫಾರ್ಮ್‌ನಲ್ಲಿರುವ ಹಂದಿಗಳನ್ನೂ ಕೊಲ್ಲಲು ಆದೇಶಿಸಲಾಗಿದೆ. ಕೊಂದ ಹಂದಿಗಳನ್ನು ಶಿಷ್ಟಾಚಾರದ ಪ್ರಕಾರ ಹೂಳಲಾಗಿದೆ.
ಹಂದಿ ಸಾಕಾಣಿಕೆ ಕೇಂದ್ರದ ಸುತ್ತಲಿನ ಒಂದು ಕಿ.ಮೀ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಲಾಗಿದ್ದು, 10 ಕಿಮೀ ವ್ಯಾಪ್ತಿಯನ್ನು ರೋಗ ಕಣ್ಗಾವಲು ವಲಯ ಎಂದು ಗುರುತಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಈ ಪ್ರದೇಶದಲ್ಲಿ ಹಂದಿ ಮಾಂಸ ಮಾರಾಟ ಮತ್ತು ಇತರ ಸ್ಥಳಗಳಿಗೆ ಸಾಗಿಸುವುದನ್ನು ಮೂರು ತಿಂಗಳವರೆಗೆ ನಿಷೇಧಿಸಲಾಗಿದೆ.