26/11 ದಾಳಿಯ ಸಂದರ್ಭ ಮುಂಬೈಯಲ್ಲಿ ಇದ್ದುದಾಗಿ ಒಪ್ಪಿಕೊಂಡ ತಹಾವುರ್ ರಾಣಾ
ತಹಾವುರ್ ರಾಣಾ | PC :thehindu.com
ಹೊಸದಿಲ್ಲಿ: ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ತಹಾವುರ್ ಹುಸೈನ್ ರಾಣಾ ನೀಡಿರುವ ಸ್ಫೋಟಕ ತಪ್ಪೊಪ್ಪಿಗೆ ಹೇಳಿಕೆ ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ಬಹಿರಂಗಪಡಿಸಿದೆ.
ದಾಳಿಯ ಸಂದರ್ಭ ತಾನು ಮುಂಬೈಯಲ್ಲಿ ಇದ್ದೆ ಎಂದು ರಾಣಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಅಲ್ಲದೆ, ಪಾಕಿಸ್ತಾನಿ ಶಕ್ತಿಗಳೊಂದಿಗೆ ತನ್ನ ದೀರ್ಘ ಕಾಲದ ಸಂಬಂಧವನ್ನು ದೃಢಪಡಿಸಿದ್ದಾನೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.
ತಾನು ಹಾಗೂ ತನ್ನ ನಿಕಟ ಸಹವರ್ತಿ ಡೆವಿಡ್ ಕೊಲೆಮನ್ ಹೆಡ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬ (ಎಲ್‌ಇಟಿ)ದ ಹಲವು ತರಬೇತಿಗಳಲ್ಲಿ ಭಾಗಿಯಾಗಿದ್ದೆವು ಎಂದು
ಪ್ರಸ್ತುತ ದಿಲ್ಲಿಯ ತಿಹಾರ್ ಕಾರಾಗೃಹದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಕಸ್ಟಡಿಯಲ್ಲಿರುವ ರಾಣಾ ತಿಳಿಸಿದ್ದಾನೆ ಎಂದು ಮೂಲಗಳು ‘ಇಂಡಿಯಾ ಟುಡೆ’ಗೆ ತಿಳಿಸಿವೆ.
ಲಷ್ಕರೆ ತಯ್ಯಿಬ ಪ್ರಾಥಮಿಕವಾಗಿ ಬೇಹುಗಾರಿಕೆ ಜಾಲವಾಗಿ ಕಾರ್ಯ ನಿರ್ವಹಿಸುತ್ತಿತ್ತು ಹಾಗೂ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್‌ಐ)ನೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿತ್ತು ಎಂದು ರಾಣಾ ಮುಂಬೈ ಕ್ರೈಮ್ ಬ್ರಾಂಚ್ ಗೆ ತಿಳಿಸಿರುವುದಾಗಿ ವರದಿಯಾಗಿದೆ.
ಮುಂಬೈಯಲ್ಲಿ ತನ್ನ ಸಂಸ್ಥೆಯ ವಲಸೆ ಕೇಂದ್ರವನ್ನು ಆರಂಭಿಸುವ ಯೋಚನೆ ತನ್ನದೇ ಆಗಿತ್ತು. ಅದಕ್ಕೆ ಸಂಬಂಧಿಸಿದ ಎಲ್ಲಾ ಹಣಕಾಸು ವಹಿವಾಟುಗಳನ್ನು ವ್ಯವಹಾರ ವೆಚ್ಚಗಳಾಗಿ ಪ್ರಸ್ತುಪಡಿಸಲಾಗಿತ್ತು ಎಂದು ರಾಣಾ ಒಪ್ಪಿಕೊಂಡಿದ್ದಾನೆ.
ಬಹುಮುಖ್ಯವಾಗಿ, 26/11 ದಾಳಿಯ ಸಂದರ್ಭ ಮುಂಬೈಯಲ್ಲಿ ತನ್ನ ಉಪಸ್ಥಿತಿ ಆಕಸ್ಮಿಕವಲ್ಲ. ಬದಲಾಗಿ ಭಯೋತ್ಪಾದಕ ಕಾರ್ಯಾಚರಣೆಯ ಯೋಜಿತ ಭಾಗವಾಗಿತ್ತು ಎಂದು ರಾಣಾ ಒಪ್ಪಿಕೊಂಡಿದ್ದಾನೆ ಎಂದು ವರದಿ ಹೇಳಿದೆ.