×
Ad

ತಮಿಳು ಸಿನೆಮಾಗಳ ಡಬ್ಬಿಂಗ್ ಹೇಳಿಕೆ ವಿವಾದ | ಒಂದು ಭಾಷೆಯನ್ನಾಗಿ ಹಿಂದಿಯನ್ನು ಎಂದೂ ವಿರೋಧಿಸಲಿಲ್ಲ: ಪವನ್ ಕಲ್ಯಾಣ್

Update: 2025-03-16 20:10 IST

ಪವನ್ ಕಲ್ಯಾಣ್ | PC : PTI 

ಅಮರಾವತಿ: ಹಿಂದಿ ಭಾಷಿಕ ರಾಜ್ಯಗಳಿಂದ ಆದಾಯದ ಮೇಲೆ ಕಣ್ಣಿಟ್ಟು ತಮಿಳು ಚಿತ್ರಗಳನ್ನು ಹಿಂದಿಗೆ ಡಬ್ ಮಾಡಲಾಗುತ್ತದೆ ಎಂಬ ತನ್ನ ಹೇಳಿಕೆಯ ಕುರಿತು ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಾರ್ಟಿಯ ನಾಯಕ ಪವನ್ ಕಲ್ಯಾಣ್ ಅವರು,ತಾನೆಂದಿಗೂ ಹಿಂದಿ ಭಾಷೆಯನ್ನು ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಲವಂತದಿಂದ ಭಾಷೆಯೊಂದನ್ನು ಹೇರುವುದು ಅಥವಾ ಭಾಷೆಯನ್ನು ಕುರುಡಾಗಿ ವಿರೋಧಿಸುವುದು ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಏಕತೆಯನ್ನು ಸಾಧಿಸಲು ನೆರವಾಗುವುದಿಲ್ಲ ಎಂದು ಅವರು ಶನಿವಾರ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಒಂದು ಭಾಷೆಯಾಗಿ ಹಿಂದಿಯನ್ನು ತಾನೆಂದೂ ವಿರೋಧಿಸಿಲ್ಲ,ಆದರೆ ಅದನ್ನು ಕಡ್ಡಾಯವಾಗಿಸುವುದನ್ನು ಮಾತ್ರ ವಿರೋಧಿಸಿದ್ದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯು ಹಿಂದಿಯನ್ನು ಕಡ್ಡಾಯಗೊಳಿಸಿಲ್ಲ,ಹೀಗಾಗಿ ಅದರ ಹೇರಿಕೆಯ ಕುರಿತು ತಪ್ಪು ನಿರೂಪಣೆಗಳನ್ನು ಹರಡುವುದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.

ಎನ್‌ಇಪಿಯಡಿ ವಿದ್ಯಾರ್ಥಿಗಳು ವಿದೇಶಿ ಭಾಷೆಯ ಜೊತೆ ತಮ್ಮ ಮಾತೃಭಾಷೆ ಸೇರಿದಂತೆ ಯಾವುದೇ ಎರಡು ಭಾರತೀಯ ಭಾಷೆಗಳನ್ನು ಕಲಿಯುವ ಆಯ್ಕೆಯನ್ನು ಹೊಂದಿರುತ್ತಾರೆ. ಅವರು ಹಿಂದಿ ಕಲಿಯಲು ಬಯಸದಿದ್ದರೆ ತಮಿಳು,ತೆಲುಗು,ಮಲಯಾಳಂ ಮತ್ತು ಕನ್ನಡ ಸೇರಿದಂತೆ ಯಾವುದೇ ಭಾರತೀಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿರುವ ಪವನ ಕಲ್ಯಾಣ,ವಿದ್ಯಾರ್ಥಿಗಳಿಗೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ಒದಗಿಸುವುದು,ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವುದು ಮತ್ತು ದೇಶದ ಶ್ರೀಮಂತ ಭಾಷಾ ವೈವಿಧ್ಯವನ್ನು ಸಂರಕ್ಷಿಸುವುದು ತ್ರಿಭಾಷಾ ಸೂತ್ರದ ಉದ್ದೇಶವಾಗಿದೆ. ರಾಜಕೀಯ ಅಜೆಂಡಾಕ್ಕಾಗಿ ಈ ಸೂತ್ರವನ್ನು ತಪ್ಪಾಗಿ ವ್ಯಾಖ್ಯಾನಿಸುವುದು ಮತ್ತು ತಾನು ಅದರ ಬಗ್ಗೆ ನಿಲುವು ಬದಲಿಸಿದ್ದೇನೆ ಎಂದು ಹೇಳಿಕೊಳ್ಳುವುದು ಪರಸ್ಪರ ತಿಳುವಳಿಕೆಯ ಕೊರತೆಯನ್ನಷ್ಟೇ ತೋರಿಸುತ್ತದೆ ಎಂದು ತಿಳಿಸಿದ್ದಾರೆ.

‘ಪ್ರತಿಯೊಬ್ಬ ಭಾರತೀಯನಿಗೂ ಭಾಷಾ ಸ್ವಾತಂತ್ರ್ಯ ಮತ್ತು ಶೈಕ್ಷಣಿಕ ಆಯ್ಕೆ’ತತ್ವವನ್ನು ಜನಸೇನಾ ದೃಢವಾಗಿ ಎತ್ತಿ ಹಿಡಿಯುತ್ತದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News