ತಮಿಳುನಾಡು ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಬಂಧನ
ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ (Photo:X/@amarprasadreddy)
ಚೆನ್ನೈ: ಚೆನ್ನೈನಲ್ಲಿ ಅನಧಿಕೃತವಾಗಿ ಸ್ಥಾಪಿಸಲಾಗಿದ್ದ ಧ್ವಜ ಸ್ತಂಭವನ್ನು ತೆರವುಗೊಳಿಸಲು ತಂದಿದ್ದ ಜೆಸಿಬಿ ಮೆಷಿನ್ ಮೇಲೆ ದಾಳಿ ನಡೆಸಿ, ಅದಕ್ಕೆ ಹಾನಿ ಮಾಡಿರುವ ಆರೋಪದಲ್ಲಿ ತಮಿಳುನಾಡು ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿಯನ್ನು ಶನಿವಾರ ಬಂಧಿಸಲಾಗಿದೆ. ಅವರನ್ನು ನವೆಂಬರ್ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು indiatoday.in ವರದಿ ಮಾಡಿದೆ.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನಿವಾಸದೆದುರು ಸ್ಥಾಪಿಸಲಾಗಿರುವ ಧ್ವಜ ಸ್ತಂಭವನ್ನು ತೆರವುಗೊಳಿಸಲು ಅಧಿಕಾರಿಗಳು ಹಾಗೂ ಪೊಲೀಸರು ತೆರಳಿದ್ದರು.
ತಾಂಬರನ್ ಪೊಲೀಸರ ಪ್ರಕಾರ, ಶುಕ್ರವಾರ ಸಂಜೆ ಅಣ್ಣಾಮಲೈ ನಿವಾಸದೆದುರಿನ ದ್ವಾರದ ಮೇಲೆ 45 ಅಡಿ ಎತ್ತರದ ಧ‍್ವಜ ಸ್ತಂಭವನ್ನು ಸ್ಥಾಪಿಸಲು ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಹೇಳಿದ್ದಾರೆ.
ಧ್ವಜ ಸ್ತಂಭವು ಭಾರಿ ವೋಲ್ಟೇಜ್ ಹೊಂದಿರುವ ವಿದ್ಯುತ್ ತಂತಿಗಳಿಗೆ ತೀರಾ ಹತ್ತಿರವಿತ್ತು ಹಾಗೂ ಸಾರ್ವಜನಿಕರಿಗೆ ಅನನುಕೂಲವನ್ನುಂಟು ಮಾಡುತ್ತಿತ್ತು ಎಂದಿರುವ ಪೊಲೀಸರು, ಧ್ವಜ ಸ್ತಂಭವನ್ನು ತೆರವುಗೊಳಿಸುವ ನಿರ್ಧಾರವನ್ನು ಮಹಾನಗರ ಪಾಲಿಕೆಯು ನಂತರ ಕೈಗೊಂಡಿದ್ದು, ಪೊಲೀಸರು ಅದನ್ನು ತೆರವುಗೊಳಿಸಬೇಕಿತ್ತು ಎಂದೂ ತಿಳಿಸಿದ್ದಾರೆ.
ಇದರ ಬೆನ್ನಿಗೇ ಅಮರ್ ಪ್ರಸಾದ್ ರೆಡ್ಡಿ ಬಂಧನವನ್ನು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಖಂಡಿಸಿದ್ದಾರೆ.
ಧ್ವಜ ಸ್ತಂಭವನ್ನು ತೆರವುಗೊಳಿಸಲು ಅಧಿಕಾರಿಗಳು ಹಾಗೂ ಕೆಲಸಗಾರರು ಸ್ಥಳಕ್ಕೆ ಧಾವಿಸಿದಾಗ ಸುಮಾರು 110 ಮಂದಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು ಎಂದು ಪೊಲೀಸರು ಹೇಳಿದ್ದಾರೆ.
“ಪದೇ ಪದೇ ಮನವಿ ಮಾಡಿದ ಹೊರತಾಗಿಯೂ ಅವರು ಸರ್ಕಾರಿ ಅಧಿಕಾರಿಗಳೊಂದಿಗೆ ವಾದಿಸುವುದನ್ನು ಮುಂದುವರಿಸಿದರು. ಇದರ ಬೆನ್ನಿಗೇ, ಕೆಲವು ಪ್ರತಿಭಟನಾಕಾರರನ್ನು ಬಂಧಿಸಿ, ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮರ್ ಪ್ರಸಾದ್ ರೆಡ್ಡಿ ಹೊರತಾಗಿ ಇನ್ನಿತರ ಐದು ಮಂದಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರೆಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.