ತಮಿಳುನಾಡು ಸಿಎಂ ಸ್ಟಾಲಿನ್, ನಟ ಅಜಿತ್ ಕುಮಾರ್ ಸಹಿತ ಹಲವರಿಗೆ ಬಾಂಬ್ ಬೆದರಿಕೆ
ನಟ ಅಜಿತ್ ಕುಮಾರ್ / ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ (Photo: instagram,PTI)
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ನಟ ಅಜಿತ್ ಕುಮಾರ್ ಹಾಗೂ ಇನ್ನಿತರ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಸರಣಿ ಬೆದರಿಕೆಯ ಇಮೇಲ್ ಹಾಗೂ ದೂರವಾಣಿ ಕರೆಗಳು ಬಂದಿದ್ದು, ಈ ಕುರಿತು ರವಿವಾರ ಚೆನ್ನೈ ನಗರ ಪೊಲೀಸರು ತನಿಖೆ ಕೈಗೊಂಡರು.
ನಗರದಾದ್ಯಂತ ನಡೆದ ತೀವ್ರ ಶೋಧ ಕಾರ್ಯಾಚರಣೆಯ ನಂತರ, ಇವು ಹುಸಿ ಬಾಂಬ್ ಬೆದರಿಕೆಗಳು ಎಂದು ಬಾಂಬ್ ನಿಷ್ಕ್ರಿಯ ದಳ ಘೋಷಿಸಿದೆ.
ನವೆಂಬರ್ 16ರಂದು kamakshi_selvaganesh@mail2tor.email ಎಂಬ ಹೆಸರಿನ ಇಮೇಲ್ ಪೊಲೀಸ್ ಮಹಾನಿರ್ದೇಶಕರ ಇಮೇಲ್ ಇನ್ಬಾಕ್ಸ್ ಗೆ ಬಂದ ನಂತರ, ಬಾಂಬ್ ಬೆದರಿಕೆಯ ಕುರಿತು ಮೊಟ್ಟಮೊದಲ ಎಚ್ಚರಿಕೆಯನ್ನು ನೀಡಲಾಯಿತು. ಈ ಸಂದೇಶದಲ್ಲಿ ತಿಯಾನ್ಮನ್ ಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಒಡ್ಡಲಾಗಿತ್ತು.
ಇದರ ಬೆನ್ನಿಗೇ, ರವಿವಾರ ಬೆಳಗ್ಗೆ 10 ಗಂಟೆಯಿಂದ 11.05 ಗಂಟೆವರೆಗೆ ಮುಖ್ಯಮಂತ್ರಿಗಳ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಬಾಂಬ್ ನಿಷ್ಕ್ರಿಯ ದಳ, ಇದು ಹುಸಿ ಬಾಂಬ್ ಬೆದರಿಕೆ ಎಂದು ದೃಢಪಡಿಸಿತು.
ಇದಾದ ಕೆಲವೇ ಕ್ಷಣಗಳಲ್ಲಿ ಚೆನ್ನೈನ ವಿವಿಧ ಪ್ರದೇಶಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಮತ್ತೆರಡು ಪ್ರತ್ಯೇಕ ಬಾಂಬ್ ಬೆದರಿಕೆಯನ್ನು ಇಮೇಲ್ ಮೂಲಕ ರವಾನಿಸಲಾಗಿತ್ತು. ಈ ಇಮೇಲ್ ನಲ್ಲಿ ನಟ ರಜನಿಕಾಂತ್, ನಟ-ನಿರ್ದೇಶಕ ಕೆ.ಎಸ್.ರವಿಕುಮಾರ್, ಮಧುರೈನಲ್ಲಿರುವ ಮಾಜಿ ಕೇಂದ್ರ ಸಚಿವ ಎಂ.ಕೆ.ಅಳಗಿರಿ, ನಟಿ ಸ್ನೇಹಾ, ಸಂಗೀತ ನಿರ್ದೇಶಕ ಅನಿರುದ್ಧ್ ಸೇರಿದಂತೆ ಇನ್ನೂ ಹಲವರ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಒಡ್ಡಲಾಗಿತ್ತು.
ಈ ಬೆದರಿಕೆಯ ಹಿನ್ನೆಲೆಯಲ್ಲಿ, ಚೆನ್ನೈ ಒನ್ ಐಟಿ ಪಾರ್ಕ್, ಮೈಲಾಪೋರ್ ಸಾಯಿಬಾಬಾ ದೇವಾಲಯ, ಪಿಎಸ್ಬಿಬಿ ಶಾಲೆ, ನಿರ್ದೇಶಕ ತಂಕರ್ ಬಚ್ಚನ್ ಅವರ ನಿವಾಸ, ನಟಿ ವಡಿವುಕರಸಿ ನಿವಾಸ, ಬಿಎಸ್ಎಸ್ ಆಸ್ಪತ್ರೆಯ ಡಾ. ಅಯ್ಯಪ್ಪನ್ ಅವರಿಗೆ ಸಂಬಂಧಿಸಿದ ಸ್ವತ್ತು, ಚಿತ್ರ ಲಕ್ಷ್ಮಣ್ ನಿವಾಸ, ಮಲೇಶಿಯಾ ಏರ್ ಲೈನ್ಸ್ ವಿಮಾನ ಹಾಗೂ ಮದ್ರಾಸ್ ಐಐಟಿ ಕ್ಯಾಂಪಸ್ ನಲ್ಲೂ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಈ ಸ್ಥಳಗಳಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗದ ಕಾರಣ, ಎಲ್ಲವೂ ಹುಸಿ ಬಾಂಬ್ ಬೆದರಿಕೆಗಳು ಎಂದು ದೃಢಪಟ್ಟಿದೆ.