×
Ad

ತಮಿಳುನಾಡು ಸರಕಾರದಿಂದ ಹಿಂದಿಯೇತರ 7 ಭಾಷೆಗಳಿಗೆ ಸಾಹಿತ್ಯ ಪ್ರಶಸ್ತಿ ಘೋಷಣೆ

Update: 2026-01-19 20:41 IST

PC | PTI

ಚೆನ್ನೈ: ಹಿಂದಿಯೇತರ ಭಾರತೀಯ ಭಾಷೆಗಳ ಸಾಹಿತ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು 7 ಭಾಷೆಗಳಿಗೆ ವಾರ್ಷಿಕ ಹೊಸ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಇದೇ ವೇಳೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಆರೋಪಿಸಿ ಅವರು ಕೇಂದ್ರ ಸರಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳ–2026ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್, ಇತ್ತೀಚೆಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಘೋಷಣೆಯನ್ನು ರದ್ದುಗೊಳಿಸಿರುವುದು ಅತ್ಯಂತ ನಿರಾಶಾದಾಯಕ ಬೆಳವಣಿಗೆಯಾಗಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯದ ಹಸ್ತಕ್ಷೇಪದಿಂದಾಗಿ ಈ ಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು. ಕಲೆ ಹಾಗೂ ಸಾಹಿತ್ಯದ ಕ್ಷೇತ್ರದಲ್ಲಿಯೂ ರಾಜಕೀಯ ಹಸ್ತಕ್ಷೇಪಗಳು ಅಪಾಯಕಾರಿ ಎಂದು ಎಚ್ಚರಿಸಿದರು.

ಈ ಹಿನ್ನೆಲೆಯಲ್ಲಿ, ತಮಿಳುನಾಡು ಸರಕಾರದ ಆಶ್ರಯದಲ್ಲಿ ಪ್ರತಿ ವರ್ಷ ಆಯ್ದ ಭಾರತೀಯ ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ‘ಸೆಮ್ಮೋಳಿ ಇಲ್ಲಕಿಯ ವಿರುದು’ (ಶಾಸ್ತ್ರೀಯ ಭಾಷಾ ಸಾಹಿತ್ಯ ಪ್ರಶಸ್ತಿ) ಎಂಬ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಪ್ರತಿ ಭಾಷೆಗೆ ರೂ.5 ಲಕ್ಷ ನಗದು ಬಹುಮಾನ ಇರಲಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಬಂಗಾಳಿ ಹಾಗೂ ಮರಾಠಿ ಭಾಷೆಗಳಲ್ಲಿನ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹಸ್ತಕ್ಷೇಪವಿಲ್ಲದೇ ಸ್ವತಂತ್ರ ತಜ್ಞರಿಗೆ ವಹಿಸಲಾಗುವುದು. ಪ್ರತಿ ಭಾಷೆಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದ್ದು, ಅವುಗಳಲ್ಲಿ ಖ್ಯಾತ ಬರಹಗಾರರು ಹಾಗೂ ಸಾಹಿತ್ಯ ತಜ್ಞರು ಸದಸ್ಯರಾಗಿರುತ್ತಾರೆ ಎಂದು ಹೇಳಿದರು.

ತಮಿಳುನಾಡು ಸರಕಾರ 'ಪೋಷಕ ಪಾತ್ರ' ವನ್ನು ಮಾತ್ರ ನಿರ್ವಹಿಸಲಿದೆ, ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಸಾಹಿತ್ಯ ಕೃತಿಗಳ ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಕಾಪಾಡುವುದೇ ಸರಕಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ತಮ್ಮ ನೇತೃತ್ವದ ದ್ರಾವಿಡ ಮಾದರಿ ಸರಕಾರ ಜ್ಞಾನವನ್ನು ಪ್ರತಿಯೊಂದು ಮನೆಗೂ ತಲುಪಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದ್ದು, ಪುಸ್ತಕ ಮೇಳವು ಅದರಲ್ಲೊಂದು ಪ್ರಮುಖ ಹೆಜ್ಜೆಯಾಗಿದೆ ಎಂದರು. ಈ ಪುಸ್ತಕ ಮೇಳದಲ್ಲಿ ಅನುವಾದ ಕೃತಿಗಳು ಹಾಗೂ ಹಕ್ಕುಸ್ವಾಮ್ಯ ವಿನಿಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News