ತಾಂತ್ರಿಕ ದೋಷ: ನ್ಯೂಯಾರ್ಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮುಂಬೈಗೆ ವಾಪಸ್
Update: 2023-11-21 21:15 IST
ಏರ್ ಇಂಡಿಯಾ ವಿಮಾನ | Photo: PTI
ಮುಂಬೈ: ಮಂಗಳವಾರ ನ್ಯೂಯಾರ್ಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದಾಗಿ ಮುಂಬೈಗೆ ವಾಪಸಾಗಿದೆ. ನಸುಕಿನ 2:19ಕ್ಕೆ ಇಲ್ಲಿಯ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವು ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ ಇರಾನಿನ ವಾಯುಪ್ರದೇಶದಿಂದ ವಾಪಸಾಗಿ ಮುಂಬೈನಲ್ಲಿ ಸುರಕ್ಷಿತವಾಗಿ ಇಳಿದಿದೆ.
ಏರ್ ಇಂಡಿಯಾ ಘಟನೆಗೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆಯಲ್ಲಿ, ಮುಂಬೈ-ನ್ಯೂಯಾರ್ಕ್ ವಿಮಾನವು ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ತಪಾಸಣೆಗಳಿಗಾಗಿ ಮುಂಬೈಗೆ ಸುರಕ್ಷಿತವಾಗಿ ವಾಪಸಾಗಿದೆ ಎಂದು ತಿಳಿಸಿದೆ.
ತೊಂದರೆಗೀಡಾಗಿದ ಪ್ರಯಾಣಿಕರಿಗೆ ವಸತಿ, ಆಹಾರ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಪರ್ಯಾಯ ವಿಮಾನದಲ್ಲಿ ಅವರನ್ನು ಕಳುಹಿಸಲಾಗಿದೆ ಎಂದು ಏರ್ ಇಂಡಿಯಾದ ಮೂಲಗಳು ತಿಳಿಸಿವೆ.