ನಕಲಿ ವೀಸಾ ದಾಖಲೆಗಳನ್ನು ಹೊಂದಿದ್ದ ಆರೋಪ: ತೆಲಂಗಾಣದ ವಿದ್ಯಾರ್ಥಿಯನ್ನು ಗಡೀಪಾರು ಮಾಡಿದ ಅಮೆರಿಕ
ಸಾಂದರ್ಭಿಕ ಚಿತ್ರ
ನಲಗೊಂಡ: ನಕಲಿ ವೀಸಾ ದಾಖಲೆಗಳನ್ನು ಹೊಂದಿದ್ದ ಆರೋಪದ ಮೇಲೆ ಅಮೆರಿಕದಿಂದ ಗಡೀಪಾರಿಗೊಳಗಾಗಿದ್ದ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ 28 ವರ್ಷದ ವಿದ್ಯಾರ್ಥಿಯೊಬ್ಬನನ್ನು ನಕಲಿ ಶೈಕ್ಷಣಿಕ ದಾಖಲೆಗಳನ್ನು ಬಳಸಿದ ಆರೋಪದ ಮೇಲೆ ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ವಿದ್ಯಾರ್ಥಿ ಪಕಿರು ಗೋಪಾಲ್ ರೆಡ್ಡಿಯನ್ನು ಡಲ್ಲಾಸ್ ವಿಮಾನ ನಿಲ್ದಾಣದಿಂದ ಗಡೀಪಾರು ಮಾಡಲಾಗಿದ್ದು, ಹೈದರಾಬಾದ್‌ಗೆ ಮರಳಿದ ಆತನ ಶೈಕ್ಷಣಿಕ ದಾಖಲೆಗಳಲ್ಲಿ ವ್ಯತ್ಯಾಸ ಇರುವುದನ್ನು ವಲಸೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ವಿಚಾರಣೆಯ ವೇಳೆ, ಹೈದರಾಬಾದಿನ ಬಿ.ಎನ್.ರೆಡ್ಡಿ ನಗರ ಮೂಲದ ಧನಲಕ್ಷ್ಮಿ ಓವರ್‌ಸೀಸ್ ಕನ್ಸಲ್ಟನ್ಸಿ ಒದಗಿಸಿದ ನಕಲಿ ಪದವಿ ಪತ್ರಗಳನ್ನು ನಾನು ಅಮೆರಿಕಗೆ ತೆರಳಲು ಬಳಕೆ ಮಾಡಿಕೊಂಡಿದ್ದೆ ಎಂದು ಆರೋಪಿ ವಿದ್ಯಾರ್ಥಿ ಪಕಿರು ಗೋಪಾಲ್ ರೆಡ್ಡಿ ತಪ್ಪೊಪ್ಪಿಕೊಂಡಿದ್ದಾನೆ ಎಂದು The New Indian Express ದಿನಪತ್ರಿಕೆ ವರದಿ ಮಾಡಿದೆ.
ಇದರ ಬೆನ್ನಿಗೇ, ಧನಲಕ್ಷ್ಮಿ ಓವರ್‌ಸೀಸ್ ಕನ್ಸಲ್ಟನ್ಸಿಯ ವ್ಯವಸ್ಥಾಪಕ ನಿರ್ದೇಶಕ ಕತೋಜ್ ಅಶೋಕ್(29)ನನ್ನು ಪೊಲೀಸರು ಬಂಧಿಸಿದ್ದು, ಆತ ಕಳೆದ ಐದು ವರ್ಷಗಳಿಂದ ಈ ಅಕ್ರಮ ವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. 2020ರಿಂದ ಇಲ್ಲಿಯವರೆಗೆ ಆತ ಕನಿಷ್ಠ 15 ಮಂದಿ ವಿದ್ಯಾರ್ಥಿಗಳಿಗೆ ನಕಲಿ ಪದವಿ ಪ್ರಮಾಣ ಪತ್ರಗಳನ್ನು ಒದಗಿಸಿದ್ದು, ಅದಕ್ಕಾಗಿ ಪ್ರತಿ ವಿದ್ಯಾರ್ಥಿಗೆ 80,000 ರೂ.ನಿಂದ 1 ಲಕ್ಷ ರೂ.ವರೆಗೆ ಶುಲ್ಕ ವಿಧಿಸಿರುವ ಸಂಗತಿ ತನಿಖೆಯ ವೇಳೆ ಬಯಲಾಗಿದೆ.
ವೀಸಾಗಳನ್ನು ಪಡೆಯಲು ಇಂತಹುದೇ ನಕಲಿ ಶೈಕ್ಷಣಿಕ ದಾಖಲೆಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚುವ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಕಲಿ ಶೈಕ್ಷಣಿಕ ದಾಖಲೆ ದಂಧೆಯಲ್ಲಿ ಭಾರಿ ಜಾಲವೊಂದು ಸಕ್ರಿಯವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.