×
Ad

ಮುಖ್ಯವಾಹಿನಿ ಮಾಧ್ಯಮಗಳ ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಮತ್ತೊಮ್ಮೆ ಬಯಲು ಮಾಡಿದ ಉಜ್ಜಯಿನಿ ಉಗುಳು ಘಟನೆ

Update: 2024-02-13 20:48 IST

ಉಜ್ಜಯಿನಿ (ಮಧ್ಯಪ್ರದೇಶ): ಜುಲೈ 2023ರಲ್ಲಿ ನಡೆದಿದ್ದ ಹಿಂದೂ ಧಾರ್ಮಿಕ ಮೆರವಣಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರ ಮೇಲೆ ಉಗಿದ ಆರೋಪದ ಮೇಲೆ ಐದು ತಿಂಗಳಿನಿಂದ ಜೈಲುವಾಸ ಅನುಭವಿಸಿದ್ದ ಉಜ್ಜಯಿನಿಯ ಹದಿನೆಂಟು ವರ್ಷದ ಅದ್ನಾನ್ ಮನ್ಸೂರಿಗೆ ಡಿಸೆಂಬರ್ 15ರಂದು ನ್ಯಾಯಾಲಯವು ಜಾಮೀನು ಮಂಜೂರು ಮಾಡಿತು. ತಮ್ಮ ಪ್ರಾಥಮಿಕ ಹೇಳಿಕೆಯನ್ನು ಆಧರಿಸಿ ಪ್ರಾಥಮಿಕ ಮಾಹಿತಿ ವರದಿಯಲ್ಲಿ ದಾಖಲಾಗಿದ್ದ ಹೇಳಿಕೆಗಳಿಂದ ದೂರುದಾರರು ಹಾಗೂ ಪ್ರತ್ಯಕ್ಷ ಸಾಕ್ಷಿಗಳು ಹಿಂದೆ ಸರಿದಿದ್ದರಿಂದ ಈ ಜಾಮೀನು ಮಂಜೂರಾಗಿದೆ.

ಜುಲೈ 2023ರಲ್ಲಿ ಲಿಖಿತ ಸಾಕ್ಷ್ಯ ಒದಗಿಸಿದ್ದ ದೂರುದಾರ ಸಾವನ್ ಲೋತ್, ಪ್ರಾಥಮಿಕ ಮಾಹಿತಿ ವರದಿಯಲ್ಲಿ ದಾಖಲಾಗಿರುವ ತನ್ನ ಹೇಳಿಕೆಯನ್ನು ನಿರಾಕರಿಸಿದ್ದು, ನಾನು ಬರೆಯದೆ ಇರುವ ಖಾಲಿ ಹಾಳೆಯ ಮೇಲೆ ಸಹಿ ಮಾಡಲು ಪೊಲೀಸರು ನನಗೆ ಸೂಚಿಸಿದ್ದರು ಎಂದು ಸಾಕ್ಷ್ಯದಲ್ಲಿ ನಮೂದಿಸಿದ್ದಾರೆ. ಇನ್ನಿಬ್ಬರು ಅಪ್ರಾಪ್ತ ಆರೋಪಿಗಳು ಜಾಮೀನಿನ ಮೇಲೆ ಬಾಲಾಪರಾಧ ಕಾರಾಗೃಹದಿಂದ ಬಿಡುಗಡೆಗೊಂಡ ಎರಡು ತಿಂಗಳ ನಂತರ ಮನ್ಸೂರಿಗೆ ಜಾಮೀನು ಮಂಜೂರಾಗಿದೆ.

ಮನ್ಸೂರಿಗೆ ಜಾಮೀನು ಮಂಜೂರು ಮಾಡುವಾಗ, "ವಿಚಾರಣಾ ನ್ಯಾಯಾಲಯದೆದುರು ದೂರುದಾರರನ್ನು ವಿಚಾರಣೆಗೊಳಪಡಿಸಿದಾಗ, ಅವರು ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಪ್ರಾಸಿಕ್ಯೂಷನ್‌ನ ಪ್ರಕರಣಕ್ಕೆ ಬೆಂಬಲ ವ್ಯಕ್ತಪಡಿಸಿಲ್ಲ ಹಾಗೂ ಅವರು ಪ್ರಾಥಮಿಕ ಮಾಹಿತಿ ವರದಿಯಲ್ಲಿ ದಾಖಲಾಗಿರುವ ತಮ್ಮ ಪ್ರಸ್ತುತ ಹೇಳಿಕೆಯ ಭಾಗವನ್ನೂ ನಿರಾಕರಿಸಿದ್ದಾರೆ. ಪ್ರತ್ಯಕ್ಷದರ್ಶಿಗಳೂ ಕೂಡಾ ಮಾಫಿ ಸಾಕ್ಷಿಗಳಾಗಿ ಬದಲಾಗಿದ್ದು, ಪ್ರಾಸಿಕ್ಯೂಷನ್ ಪ್ರಕರಣವನ್ನು ಬೆಂಬಲಿಸಿಲ್ಲ" ಎಂದು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠದ ನ್ಯಾಯಾಧೀಶ ಅನಿಲ್ ವರ್ಮ ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ಆ ಹೊತ್ತಿಗಾಗಲೇ ಹದಿಹರೆಯದ ಮುಸ್ಲಿಂ ಯುವಕರ ಬದುಕು ಮೂರಾಬಟ್ಟೆಯಾಗಿತ್ತು.

ಉಜ್ಜಯಿನಿ ಉಗುಳು ಘಟನೆಯ ಕುರಿತು ಮುಖ್ಯ ವಾಹಿನಿ ಮಾಧ್ಯಮಗಳು ಪ್ರತಿಕ್ರಿಯಿಸಿದ್ದು ಹೇಗೆ?

ಅದ್ನಾನಿ ಮನ್ಸೂರಿ ಹಾಗೂ ಇನ್ನಿಬ್ಬರು ಅಪ್ರಾಪ್ತ ಬಾಲಕರ ಬಂಧನ ಮತ್ತು ವಶ, ಮನ್ಸೂರಿ ನಿವಾಸದ ನೆಲಸಮ ಘಟನೆಯನ್ನು ಹಲವಾರು ರಾಷ್ಟ್ರೀಯ ಹಾಗೂ ಸ್ಥಳೀಯ ಸುದ್ದಿ ವಾಹಿನಿಗಳು ವ್ಯಾಪಕವಾಗಿ ಪ್ರಸಾರ ಮಾಡಿದವು. ಕೆಲವು ಸುದ್ದಿ ವಾಹಿನಿಗಳಂತೂ ಈ ಘಟನೆಯನ್ನು 'ಉಜ್ಜಯಿನಿ ತೂಕ್ ಕಾಂಡ್ (ಉಜ್ಜಯಿನಿ ಉಗುಳು ಘಟನೆ)' ಎಂದೇ ಬಣ್ಣಿಸಿದವು. India Today, News 18 India, News 18 Rajasthan, News 18 MP & Chhattisgarh, Zee News ಹಾಗೂ Hindustanನಂಥ ಮುಖ್ಯ ವಾಹಿನಿಯ ಸುದ್ದಿ ಮಾಧ್ಯಮಗಳು ಆರೋಪಿಗಳ ವಿರುದ್ಧ ಕೈಗೊಂಡ ಬುಲ್ಡೋಝರ್ ಕಾರ್ಯಾಚರಣೆಯನ್ನು ಶ್ಲಾಘಿಸಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವು.

ಆರಂಭಿಕ ಪಾಠವಾಗಿ ತರಬೇತಿ ನಿರತ ಪತ್ರಕರ್ತರು ಹಾಗೂ ಉಪ ಸಂಪಾದಕರು ತನಿಖೆಯ ಹಂತದಲ್ಲಿರುವ ಅಪರಾಧ ಪ್ರಕರಣದಲ್ಲಿ 'ಆರೋಪಿಗಳು' ಎಂಬ ಪದವನ್ನು ಬಳಸುವ ಮೂಲಕ ಪತ್ರಿಕೋದ್ಯಮದ ಪ್ರಾಥಮಿಕ ಪಾಠವನ್ನು ತಿಳಿ ಹೇಳಿದರು. ಆದರೆ, ಬುಲ್ಡೋಝರ್ ಕಾರ್ಯಾಚರಣೆಯ ಮೂಲಕ ಮೂವರು ಮುಸ್ಲಿಂ ಯುವಕರಿಗೆ ಶಿಕ್ಷೆ ದೊರಕಿಸಿ ಕೊಡುವ ಉತ್ಸಾಹದಲ್ಲಿದ್ದ ಹಿರಿಯ ಪತ್ರಕರ್ತರು ಹಾಗೂ ಟಿವಿ ನಿರೂಪಕರು ಪತ್ರಿಕೋದ್ಯಮದ ಈ ಪ್ರಾಥಮಿಕ ಪಾಠವನ್ನು ಮರೆತರು.

News 18 India ಸುದ್ದಿ ವಾಹಿನಿಯ ಅಮನ್ ಚೋಪ್ರಾ, Zee News ಸುದ್ದಿ ವಾಹಿನಿಯ ಸುದ್ದಿ ನಿರೂಪಕ ಅಂಕುರ್ ಭಾರದ್ವಾಜ್, India Today ಸುದ್ದಿ ಸಂಸ್ಥೆ, ಅರ್ನಾಬ್ ಗೋಸ್ವಾಮಿ ಮಾಲಕತ್ವದ Republic Bharat ಸುದ್ದಿ ಸಂಸ್ಥೆ, ಬಲಪಂಥೀಯ ಕಾರ್ಯಸೂಚಿ ಹೊಂದಿರುವ OpIndia ಸುದ್ದಿ ಸಂಸ್ಥೆ ಸೇರಿದಂತೆ ಹಲವಾರು ಸುದ್ದಿ ವಾಹಿನಿಗಳು ಮನ್ಸೂರಿ ನಿವಾಸದ ನೆಮಸಮ ಘಟನೆಗೆ ಹೆಚ್ಚು ಒತ್ತು ನೀಡಿ ಪ್ರಸಾರ ಮಾಡಿದವು.

ಆದರೆ, ಮನ್ಸೂರಿಗೆ ಜಾಮೀನು ಮಂಜೂರಾಗಿ ಎರಡು ವಾರ ಕಳೆದರೂ ಮೇಲಿನ ಯಾವ ಸುದ್ದಿ ಸಂಸ್ಥೆಯೂ ಈ ಕುರಿತು ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮ ಪುಟದಲ್ಲಾಗಲಿ ಅಥವಾ ಯೂಟ್ಯೂಬ್ ಖಾತೆಯಲ್ಲಾಗಲಿ ಸುದ್ದಿ ಪ್ರಕಟಿಸಿರುವುದು ಕಂಡು ಬಂದಿಲ್ಲ ಅಥವಾ ದೂರುದಾರರು ಮತ್ತು ಪ್ರತ್ಯಕ್ಷದರ್ಶಿಗಳು ತಮ್ಮ ಹೇಳಿಕೆಗಳಿಂದ ಹಿಂದೆ ಸರಿದಿರುವ ಸಂಗತಿಯನ್ನು ಪ್ರಕಟಿಸಲು ಹೋಗಿಲ್ಲ.

ಮುಸ್ಲಿಮರು ಆರೋಪಿಗಳಾಗಿರುವ ಅಪರಾಧ ಕೃತ್ಯಗಳನ್ನು ರೋಚಕಗೊಳಿಸುವುದು ಭಾರತೀಯ ಮುಖ್ಯ ವಾಹಿನಿ ಮಾಧ್ಯಮಗಳಿಗೆ ಸಹಜ ಸಂಗತಿಯಾಗಿ ಬದಲಾಗಿರುವುದು ಅಚ್ಚರಿಯ ವಿಷಯವೇನಲ್ಲ. ಹಾಗೆಯೇ ಮೂವರು ಆರೋಪಗಳಿಗೆ ಜಾಮೀನು ಮಂಜೂರಾಗಿರುವುದು, ದೂರುದಾರರು ತಿರುಗಿ ಬಿದ್ದಿರುವುದರ ಬಗೆಗಿನ ಸುದ್ದಿಗಳ ಗೈರೂ ಕೂಡಾ. ಕಳೆದ ಒಂದು ದಶಕ ಅಥವಾ ಅದಕ್ಕೂ ಹಿಂದಿನಿಂದ ಮುಸ್ಲಿಮರನ್ನು ಖಳರನ್ನಾಗಿಸುವುದು ಭಾರತೀಯ ಮುಖ್ಯ ವಾಹಿನಿ ಮಾಧ್ಯಮಗಳ ಪ್ರಮಾಣೀಕೃತ ಕಾರ್ಯನಿರ್ವಹಣಾ ವಿಧಾನವೇ ಅಗಿಬಿಟ್ಟಿದೆ. ಇಂತಹ ನಿದರ್ಶನಗಳು ಸಿದ್ಧ ಸ್ಥಿತಿಯಲ್ಲಿ ದೊರೆಯುವುದರಿಂದ, ಅವುಗಳನ್ನು ಹೇರಳವಾಗಿ ಪ್ರದರ್ಶಿಸಬಹುದು ಎಂಬಂತೆ ಕಾಣುತ್ತಿದೆ. ಈ ಮಾತಿಗೆ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ತಬ್ಲೀಗಿ ಜಮಾತ್ ಸಭೆಯನ್ನು ಪ್ರಸಾರ ಮಾಡಿದ ರೀತಿ ತಕ್ಷಣದ ಉದಾಹರಣೆಯಾಗಿದೆ.

ಸೌಜನ್ಯ: altnews.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News