×
Ad

ತಿರುಪತಿ | ಬಾಲಕಿಯ ಅತ್ಯಾಚಾರ, ಕೊಲೆ : ಹೊಲದಲ್ಲಿ ಹೂತು ಹಾಕಿದ್ದ ಮೃತದೇಹ ಪತ್ತೆ

Update: 2024-11-02 16:29 IST

PC : NDTV 

ತಿರುಪತಿ : 3 ವರ್ಷದ ಬಾಲಕಿಯನ್ನು ಆಕೆಯ ಸಂಬಂಧಿಯೇ ಅತ್ಯಾಚಾರ ಮತ್ತು ಕೊಲೆ ಮಾಡಿ ಹೊಲದಲ್ಲಿ ಹೂತು ಹಾಕಿರುವ ಆಘಾತಕಾರಿ ಘಟನೆ ತಿರುಪತಿಯಲ್ಲಿ ನಡೆದಿದೆ.

22ರ ಹರೆಯದ ಆರೋಪಿಯನ್ನು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿ ಮತ್ತು ಆರೋಪಿ ಒಂದೇ ಕಾಲನಿಯಲ್ಲಿ ವಾಸಿಸುತ್ತಿದ್ದರು. ಮಗುವಿಗೆ ಚಾಕಲೇಟ್ ನೀಡುವುದಾಗಿ ಆರೋಪಿ ಹೊಲಕ್ಕೆ ಕರೆದೊಯ್ದಿದ್ದ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಮೃತದೇಹವನ್ನು ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಹುಡುಕಾಟ ನಡೆಸಿದ್ದರು. ಬಳಿಕ ಆಕೆಯನ್ನು ಆರೋಪಿಯೊಂದಿಗೆ ಕೊನೆಯ ಬಾರಿ ನೋಡಿದ್ದಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಶಾಲೆಯ ಬಳಿಯ ತೆರೆದ ಮೈದಾನಕ್ಕೆ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಬಾಲಕಿಯನ್ನು ಕೊಂದು ದೇಹವನ್ನು ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಲ್.ಸುಬ್ಬರಾಯುಡು ತಿಳಿಸಿದ್ದಾರೆ.

ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ತನಿಖೆಯ ವೇಳೆ ಆರೋಪಿ, ಬಾಲಕಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಎನ್ನುವುದು ಬಯಲಾಗಿದೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಾಲಕಿಯ ಕುಟುಂಬಕ್ಕೆ 10 ಲಕ್ಷ ಆರ್ಥಿಕ ನೆರವು ನೀಡಲು ಆದೇಶಿಸಿದ್ದಾರೆ. ರವಿವಾರ ಗೃಹ ಸಚಿವೆ ಅನಿತಾ ವಂಗಲಪುಡಿ ಬಾಲಕಿಯ ಕುಟುಂಬವನ್ನು ಭೇಟಿ ಮಾಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News