ಪೈಲಟ್ ಗಳ ಪಾತ್ರದ ಬಗ್ಗೆ ಈಗಲೇ ನಿರ್ಣಯಕ್ಕೆ ಬರುವುದು ತೀರಾ ಅವಸರವಾಗುತ್ತದೆ: ಎಎಐಬಿ ಮಾಜಿ ಮುಖ್ಯಸ್ಥ
PC : PTI
ಹೊಸದಿಲ್ಲಿ: ಕಳೆದ ಜೂನ್ 12ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ದಳ ಸಲ್ಲಿಸಿರುವ ಪ್ರಾಥಮಿಕ ವರದಿಯನ್ನು ಆಧರಿಸಿ, ಅಪಘಾತದಲ್ಲಿ ಪೈಲಟ್ ಗಳ ಪಾತ್ರದ ಕುರಿತು ನಿರ್ಣಯಿಸುವುದು ತೀರಾ ಅವಸರವಾಗುತ್ತದೆ. ತನ್ನ ಅಂತಿಮ ವರದಿಯಲ್ಲಿ ಅಪಘಾತದ ಬಹುತೇಕ ಸಾಧ್ಯತಾ ಕಾರಣದ ಬಗ್ಗೆ ಎಎಐಬಿ ಉಲ್ಲೇಖಿಸಲಿದೆ ಎಂದು ರವಿವಾರ ಎಎಐಬಿ ಮಾಜಿ ಮುಖ್ಯಸ್ಥ ಅರೊಬಿಂದೊ ಹಂಡಾ ಅಭಿಪ್ರಾಯಪಟ್ಟಿದ್ದಾರೆ.
260 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ದಳ ತನ್ನ ಪ್ರಾಥಮಿಕ ವರದಿ ಬಿಡುಗಡೆ ಮಾಡಿದ ಮರುದಿನ ಈ ಕುರಿತು ಪ್ರತಿಕ್ರಿಯಿಸಿದ ಅರೊಬಿಂದೊ ಹಂಡಾ, “ಎಎಐಬಿ ತನ್ನ ತನಿಖೆಯನ್ನು ನ್ಯಾಯಯುತ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ರೀತಿಯಲ್ಲಿ ಮುಕ್ತಾಯಗೊಳಿಸಲು ನಾವು ಅವಕಾಶ ನೀಡಬೇಕು” ಎಂದು ಕಿವಿಮಾತು ಹೇಳಿದ್ದಾರೆ.
2020ರಲ್ಲಿ ಕೋಯಿಕ್ಕೋಡ್ ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ವಿಮಾನ ಅಪಘಾತಗಳ ತನಿಖೆಯನ್ನು ನಡೆಸಿದ ದಾಖಲೆಯನ್ನು ಅರೊಬಿಂದೊ ಹಂಡಾ ಹೊಂದಿದ್ದಾರೆ.
“ಎಎಐಬಿ ಉತ್ತಮ ಕೆಲಸ ಮಾಡಿದೆ. ಅವರು ಮುಂದುವರಿದಂತೆ, ಇಂಧನ ಸ್ವಿಚ್ ಗಳು ಏಕೆ ಕಟ್ ಆಫ್ ಆದವು ಹಾಗೂ ಅಲ್ಲೇನಾದರೂ ತಾಂತ್ರಿಕ ವೈಫಲ್ಯ ಅಥವಾ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಕಾಣಿಸಿಕೊಂಡಿತ್ತೆ ಎಂಬುದನ್ನು ಪತ್ತೆ ಹಚ್ಚಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಪಘಾತಕ್ಕೀಡಾದ 787-8 ಡ್ರೀಮ್ ಲೈನರ್ ಬೋಯಿಂಗ್ ವಿಮಾನದ ಇಂಜಿನ್ ಗೆ ಇಂಧನ ಪೂರೈಸುವ ಸ್ವಿಚ್ ಗಳು ಕೆಲವೇ ಸೆಕೆಂಡ್ ಗಳ ಅಂತರದಲ್ಲಿ ಕಟ್ ಆಫ್ ಆಗಿ, ನಂತರ ಸ್ವಿಚ್ಡ್ ಆನ್ ಆಗಿದ್ದವು ಎಂದು ಶನಿವಾರ ಎಎಐಬಿ ಬಿಡುಗಡೆ ಮಾಡಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.