×
Ad

ಬಿಹಾರ | ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಇಂಡಿಯಾ ಮೈತ್ರಿಕೂಟದಿಂದ ಪ್ರತಿಭಟನೆ: ರೈಲುಗಳ ನಿಲುಗಡೆ, ರಸ್ತೆಗಳು ಬಂದ್

Update: 2025-07-09 11:12 IST
Screengrab:X/@ANI

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನವನ್ನು ವಿರೋಧಿಸಿ, ಆರ್‌ಜೆಡಿ ಹಾಗೂ ಮಹಾಘಟಬಂಧನ್ ಮೈತ್ರಿಕೂಟದ ಇನ್ನಿತರ ಪಕ್ಷಗಳು ಇಂದು ಬಿಹಾರದಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚುವ ಮೂಲಕ, ಸ್ಥಳೀಯ ನಾಯಕರು ಸೋನ್ಪುರ್, ಹಾಜಿಪುರ್ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಅಲ್ಲದೆ, ಜೆಹನಾಬಾದ್‌ನಲ್ಲಿ ಆರ್‌ಜೆಡಿ ವಿದ್ಯಾರ್ಥಿ ಘಟಕವು ಹಳಿಗಳಲ್ಲಿ ರೈಲುಗಳನ್ನು ತಡೆದ ಘಟನೆ ವರದಿಯಾಗಿದೆ.

ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ರಸ್ತೆ ತಡೆಗೆ ಕರೆ ನೀಡಲಾಗಿದ್ದು, ಕಾಕತಾಳೀಯವೆಂಬಂತೆ ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ಅವುಗಳ ಸಹ ಸಂಘಟನೆಗಳು ಕನಿಷ್ಠ ವೇತನ ಹಾಗೂ ನೂತನ ಕಾರ್ಮಿಕ ನೀತಿ ಸಂಹಿತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಬಂದ್‌ಗೆ ಕರೆ ನೀಡಿರುವ ಹೊತ್ತಿನಲ್ಲೇ ಈ ರಸ್ತೆ ತಡೆ ಪ್ರತಿಭಟನೆಯೂ ನಡೆಯುತ್ತಿದೆ.

ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನ ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಈ ಪ್ರತಿಭಟನಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಗೋಲಂಬರ್ ಬಳಿ ಇರುವ ಆದಾಯ ತೆರಿಗೆ ಇಲಾಖೆ ಕಚೇರಿಯಿಂದ ಚುನಾವಣಾ ಆಯೋಗದ ಕಚೇರಿಯವರೆಗೆ ಈ ಪಾದಯಾತ್ರೆ ಮುಂದುವರಿಯಲಿದೆ. ಈ ಪಾದಯಾತ್ರೆಯಲ್ಲಿ ತೇಜಸ್ವಿ ಯಾದವ್ ಕೂಡಾ ಪಾಲ್ಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News