×
Ad

ಶಿಕ್ಷಕಿ, ಆಕೆಯ ಗೆಳೆಯನಿಂದ ಬಾಲಕನ ಹತ್ಯೆ: ತನಿಖೆಯ ದಿಕ್ಕು ತಪ್ಪಿಸಲು 'ಅಲ್ಲಾಹು ಅಕ್ಬರ್‌' ಎಂದು ಪತ್ರಬರೆದ ಆರೋಪಿಗಳು

Update: 2023-10-31 21:15 IST

Photo: NDTV

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ 17 ವರ್ಷದ ಬಾಲಕನನ್ನು ಶಿಕ್ಷಕಿಯ ಗೆಳೆಯ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪ್ರಕರಣವನ್ನು ಅಪಹರಣದಂತೆ ಬಿಂಬಿಸಲು ಆರೋಪಿಗಳು ಪ್ರಯತ್ನಪಟ್ಟಿದ್ದಾರೆ.

10ನೇ ತರಗತಿ ವಿದ್ಯಾರ್ಥಿಯ ಮೃತದೇಹವನ್ನು ಆರೋಪಿ ಮನೆಯಲ್ಲಿ ಪೊಲೀಸರು ಪತ್ತೆ ಹಚ್ಚಿದ ಬಳಿಕ ಪೊಲೀಸರಿಗೆ ಕೊಲೆ ರಹಸ್ಯ ತಿಳಿದುಬಂದಿದೆ.

ಬಾಲಕನ ಟ್ಯೂಷನ್ ಶಿಕ್ಷಕಿ ರಚಿತಾ ಮತ್ತು ಆಕೆಯ ಗೆಳೆಯ ಪ್ರಭಾತ್ ಶುಕ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರ್ಯನ್ ಎಂಬ ಮತ್ತೊಬ್ಬ ವ್ಯಕ್ತಿಯನ್ನೂ ಬಂಧಿಸಲಾಗಿದೆ.

ತನ್ನ ಗೆಳತಿಯೊಂದಿಗೆ ಬಾಲಕ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಮೇರೆಗೆ ಆರೋಪಿಯು ಬಾಲಕನನ್ನು ಕೊಲೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿರುವುದಾಗಿ ʼಇಂಡಿಯಾ ಟುಡೇʼ ವರದಿ ಮಾಡಿದೆ.

ಮೃತ ಬಾಲಕ ಕಾನ್ಪುರದ ಪ್ರಮುಖ ಬಟ್ಟೆ ವ್ಯಾಪಾರಿಯ ಪುತ್ರನಾಗಿದ್ದು, ಆತ ಕೋಚಿಂಗ್ ತರಗತಿಗಳಿಗೆಂದು ಸಂಜೆ ಸ್ಕೂಟರ್‌ನಲ್ಲಿ ಮನೆಯಿಂದ ಹೊರಟು ವಾಪಸ್ ಬಂದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಂತರ, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಸ್ಕೂಟರ್‌ನಲ್ಲಿ ಬಾಲಕನ ಮನೆಗೆ ಆಗಮಿಸಿ, ತಮ್ಮ ಮಗನನ್ನು ಸುರಕ್ಷಿತವಾಗಿ ಹಿಂದಿರುಗಿಸಲು 30 ಲಕ್ಷ ರೂ.ಗಳನ್ನು ನೀಡಬೇಕೆಂದು ಎಂಬ ಬೆದರಿಕೆ ಪತ್ರವನ್ನು ನೀಡಿ ಹೋಗಿದ್ದಾನೆ.

ಪತ್ರದಲ್ಲಿ "ಅಲ್ಲಾ ಹು ಅಕ್ಬರ್, ಅಲ್ಲಾಹನಲ್ಲಿ ನಂಬಿಕೆ ಇಡಿ” ಎಂದು ಸಹ ಬರೆಯಲಾಗಿದ್ದು, ಈ ಪತ್ರವು ತನಿಖೆಯ ದಿಕ್ಕು ತಪ್ಪಿಸುವ ತಂತ್ರವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಬಾಲಕ ಆರೋಪಿಯೊಂದಿಗೆ ಸ್ಟೋರ್ ರೂಮ್‌ಗೆ ಹೋಗುತ್ತಿರುವುದು ಕಂಡು ಬಂದಿದೆ. ಕೆಲವು ನಿಮಿಷಗಳ ನಂತರ, ಶುಕ್ಲಾ ಸ್ಟೋರ್ ರೂಂನಿಂದ ಹೊರಬಂದನಾದರೂ, ಆದರೆ ಹುಡುಗ ಹೊರಬಂದಿರಲಿಲ್ಲ. ನಂತರ ಆರೋಪಿ ಬಟ್ಟೆ ಬದಲಿಸಿ ಬಾಲಕನ ಸ್ಕೂಟರ್‌ನಲ್ಲಿ ಹೋಗುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಕ್ಷಕಿ ರಚಿತಾ ಕೂಡಾ ತಾನು ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾಳೆ. ಪತ್ರದ ಕೈಬರಹವು ತನ್ನ ಗೆಳೆಯ ಪ್ರಭಾತ್ ಶುಕ್ಲಾ ನದ್ದು ಎಂದು ಬಹಿರಂಗಪಡಿಸಿದ್ದಾಳೆ.

ಘಟನೆ ಬಗ್ಗೆ ಸಮಾಜವಾದಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಖಂಡನೆ ವ್ಯಕ್ತಪಡಿಸಿದ್ದು, “ಕಾನ್ಪುರದಲ್ಲಿ ಜವಳಿ ಉದ್ಯಮಿಯೊಬ್ಬರ ಮಗನನ್ನು ಅಪಹರಿಸಿ ಹತ್ಯೆಗೈದ ಪ್ರಕರಣದಲ್ಲಿ, ಅಪರಾಧವನ್ನು ನಿರ್ದಿಷ್ಟ ಸಮುದಾಯಕ್ಕೆ ಜೋಡಿಸಿ, ಆ ಮೂಲಕ ಪೊಲೀಸರ ಗಮನವನ್ನು ಬೇರೆಡೆಗೆ ತಿರುಗಿಸುವ ಸಂಚು ಅತ್ಯಂತ ಗಂಭೀರ ವಿಷಯವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

"ಈ ರೀತಿಯ ಪ್ರವೃತ್ತಿಯು ದೇಶ ಮತ್ತು ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾಗಿದೆ, ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News