ಸಂಸ್ಕೃತ ಮೃತ ಭಾಷೆ: ಉದಯನಿಧಿ ಸ್ಟಾಲಿನ್
ತಮಿಳುನಾಡು ಡಿಸಿಎಂ ಹೇಳಿಕೆಗೆ ಬಿಜೆಪಿ ಆಕ್ರೋಶ
ಉದಯನಿಧಿ ಸ್ಟಾಲಿನ್ | Photo Credit : PTI
ಚೆನ್ನೈ, ನ. 21: ಸಂಸ್ಕೃತ ಮೃತ ಭಾಷೆ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಶುಕ್ರವಾರ ಹೇಳಿದ್ದಾರೆ.
ಅವರ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಹೇಳಿಕೆಗಳನ್ನು ನೀಡುವಾಗ ನಾಯಕರು ಜವಾಬ್ದಾರಿಯುತವಾಗಿರಬೇಕು ಎಂದು ಅದು ತಿಳಿಸಿದೆ.
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಮಿಳುನಾಡಿನ ಅಭಿವೃದ್ಧಿಗೆ ಕೇವಲ 150 ಕೋ.ರೂ. ಮಂಜೂರು ಮಾಡಿರುವುದಕ್ಕೆ ಅವರು ಕೇಂದ್ರ ಸರಕಾರವನ್ನು ಟೀಕಿಸಿದರು.
ಇದಕ್ಕೆ ತದ್ವಿರುದ್ಧವಾಗಿ ‘‘ಮೃತ ಭಾಷೆ ಸಂಸ್ಕೃತ’’ಕ್ಕೆ 2,400 ಕೋ. ರೂ. ಮುಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್, ಯಾರೊಬ್ಬರಿಗೂ ಯಾವುದೇ ಭಾಷೆಯನ್ನು, ವಿಶೇಷವಾಗಿ ದೇಶಾದ್ಯಂತ ಪ್ರಾರ್ಥನೆ ಹಾಗೂ ಆಚರಣೆಗಳಲ್ಲಿ ಇಂದಿಗೂ ಬಳಸುವ ಒಂದು ಭಾಷೆಯನ್ನು ಮೃತ ಎಂದು ಕರೆಯುವ ಹಕ್ಕಿಲ್ಲ ಎಂದಿದ್ದಾರೆ.
‘‘ಒಂದು ಭಾಷೆಯನ್ನು ಅವಮಾನಿಸುವ ಮೂಲಕ ಇನ್ನೊಂದು ಭಾಷೆಯನ್ನು ಹೊಗಳುವುದು ತಪ್ಪು. ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ನಾಯಕರು ಜವಾಬ್ದಾರಿಯುತವಾಗಿ ಮಾತನಾಡಬೇಕು’’ ಎಂದು ಅವರು ಹೇಳಿದರು.
ಅವರ ಪ್ರಕಾರ, ತಮಿಳು ಕೂಡ ಹಲವು ಪದಗಳನ್ನು ಸಂಸ್ಕೃತದಿಂದ ಸ್ವೀಕರಿಸಿದೆ.
‘‘ತಮಿಳು ಒಂದು ಮುಕ್ತ ಭಾಷೆಯಾಗಿದ್ದು, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳಿಂದ ಪದ ಹಾಗೂ ಚಿಂತನೆಗಳನ್ನು ಸ್ವೀಕರಿಸಿದೆ. ಇದು ತಮಿಳಿನ ಸಾಮರ್ಥ್ಯ, ದೌರ್ಬಲ್ಯ ಅಲ್ಲ’’ ಎಂದು ಅವರು ಹೇಳಿದ್ದಾರೆ.