×
Ad

ಉಮರ್ ಖಾಲಿದ್ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Update: 2025-09-10 21:03 IST

 ಉಮರ್ ಖಾಲಿದ್ | PC : PTI 

ಹೊಸದಿಲ್ಲಿ, ಸೆ. 10: ರಾಷ್ಟ್ರ ರಾಜಧಾನಿಯಲ್ಲಿ 2020ರ ಫೆಬ್ರವರಿಯಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿ ಕಾನೂನುಬಾಹಿರ ಚುಟವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ದಾಖಲಾಗಿರುವ ಮೊಕದ್ದಮೆಯಲ್ಲಿ ತನಗೆ ಜಾಮೀನು ನಿರಾಕರಿಸಿ ದಿಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಸುಪ್ರೀಂ ಕೋರ್ಟ್‌ ಗೆ ಹೋಗಿದ್ದಾರೆ.

ಸೆಪ್ಟಂಬರ್ 2ರಂದು ದಿಲ್ಲಿ ಹೈಕೋರ್ಟ್, ಉಮರ್ ಖಾಲಿದ್ ಮತ್ತು ಇನ್ನೋರ್ವ ಸಾಮಾಜಿಕ ಕಾರ್ಯಕರ್ತ ಶರ್ಜೀಲ್ ಇಮಾಮ್ ಸೇರಿದಂತೆ ಒಂಭತ್ತು ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು. ‘‘ಪ್ರದರ್ಶನಗಳು ಮತ್ತು ಪ್ರತಿಭಟನೆಗಳ ಸೋಗಿನಲ್ಲಿ ನಡೆಯುವ ಹಿಂಸೆಗೆ ಅವಕಾಶ ನೀಡುವಂತಿಲ್ಲ’’ ಎಂದು ನ್ಯಾಯಾಲಯವು ಹೇಳಿತ್ತು.

ದಿಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ ಇತರರೆಂದರೆ ಮುಹಮ್ಮದ್ ಸಲೀಮ್ ಖಾನ್, ಶಿಫಾವುರ‌್ರಹ್ಮಾನ್, ಅತರ್ ಖಾನ್, ಮೀರನ್ ಹೈದರ್, ಅಬ್ದುಲ್ ಖಾಲಿದ್ ಸೈಫಿ, ಗುಲ್ಫೀಶ ಫಾತಿಮ ಮತ್ತು ಶದಬ್ ಅಹ್ಮದ್. ಅದೇ ದಿನ, ಅದೇ ಹೈಕೋರ್ಟ್‌ನ ಇನ್ನೊಂದು ಪೀಠವು ಇನ್ನೋರ್ವ ಆರೋಪಿ ತಸ್ಲೀಮ್ ಅಹ್ಮದ್‌ರ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿತ್ತು.

ಕಳೆದ ವಾರ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇಮಾಮ್ ಮತ್ತು ಫಾತಿಮಾ ಸುಪ್ರೀಂ ಕೋರ್ಟ್‌ ಗೆ ಹೋಗಿದ್ದಾರೆ.

ವಿಚಾರಣಾ ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಬಳಿಕ, ಆರೋಪಿಗಳು ಹೈಕೋರ್ಟ್‌ಗೆ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News