ಚಿಕ್ಕಪ್ಪ ವಿವೇಕಾನಂದ ರೆಡ್ಡಿ ಹತ್ಯೆಗೆ ರಾಜಕೀಯ ಪ್ರೇರಿತ ಕಾರಣ: ವೈಎಸ್‌ಆರ್‌ಟಿಪಿ ಅಧ್ಯಕ್ಷೆ ಶರ್ಮಿಳಾ ಆರೋಪ
Photo: ವೈಎಸ್‌ಆರ್‌ಟಿಪಿ ಅಧ್ಯಕ್ಷೆ ವೈ.ಎಸ್.ಶರ್ಮಿಳಾ | PTI
ಹೈದರಾಬಾದ್: ವೈ.ಎಸ್.ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ವೈಎಸ್‌ಆರ್‌ಟಿಪಿ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರನ್ನು 259ನೇ ಸಾಕ್ಷಿಯಾಗಿ ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಿದೆ. ಅಕ್ಟೋಬರ್ 7, 2022ರಂದು ದಿಲ್ಲಿಯ ಸಿಬಿಐ ಕಚೇರಿಯಲ್ಲಿ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ಕುರಿತು ತಮ್ಮ ಹೇಳಿಕೆ ದಾಖಲಿಸಿರುವ ಶರ್ಮಿಳಾ, ನನ್ನ ಚಿಕ್ಕಪ್ಪನ ಹತ್ಯೆಯ ಹಿಂದೆ ರಾಜಕೀಯ ಪ್ರೇರಿತ ಕಾರಣವಿರಬಹುದು ಎಂಬ ಸುಳಿವು ನೀಡಿದ್ದು, ಆದರೆ, ಈ ಹತ್ಯೆಗೆ ಸಂಬಂಧಿಸಿದಂತೆ ನನ್ನ ಬಳಿ ಯಾವುದೇ ಬಲವಾದ ಸಾಕ್ಷ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಶರ್ಮಿಳಾರ ಸಾಕ್ಷ್ಯದ ಪ್ರಕಾರ, ಅವರ ನಿವಾಸಕ್ಕೆ ಭೇಟಿ ನೀಡಿದ್ದ ವಿವೇಕಾನಂದ, ಕಡಪ ಲೋಕಸಭಾ ಕ್ಷೇತ್ರದಿಂದ ವೈ.ಎಸ್.ಅವಿನಾಶ್ ರೆಡ್ಡಿ ಸ್ಪರ್ಧಿಸುತ್ತಿರುವುದಕ್ಕೆ ತೀವ್ರವಾಗಿ ಆಕ್ಷೇಪಿಸಿ, ಶರ್ಮಿಳಾ ಅವರೇ ಅಲ್ಲಿಂದ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಈ ಉಪಾಯವನ್ನು ತನ್ನ ಸಹೋದರ ಜಗನ್ ಬೆಂಬಲಿಸಲಾರರು ಎಂಬ ಕಾರಣಕ್ಕೆ ಆಕೆ ಅವರ ಮಾತಿಗೆ ಸಮ್ಮತಿ ಸೂಚಿಸಲು ಹಿಂಜರಿದಿದ್ದಾರೆ. ಆದರೆ, ವಿವೇಕಾನಂದ ಅದಕ್ಕಾಗಿ ಪಟ್ಟು ಹಿಡಿದಿದ್ದರಿಂದ, ಶರ್ಮಿಳಾ ಅವರು ಮಣಿದಿದ್ದಾರೆ ಎಂದು ಹೇಳಲಾಗಿದೆ.
ವೈ.ಎಸ್.ಅವಿನಾಶ್ ರೆಡ್ಡಿ ವಿರುದ್ಧ ನನ್ನ ಚಿಕ್ಕಪ್ಪ ಸ್ಪರ್ಧಿಸಿದ್ದರಿಂದ, ಅವಿನಾಶ್ ರೆಡ್ಡಿ ಕುಟುಂಬದ ಸದಸ್ಯರು ಅವರ ವಿರುದ್ಧ ಅಸಮಾಧಾನ ಬೆಳೆಸಿಕೊಂಡಿರಬಹುದು ಎಂದೂ ಆಕೆ ಬಹಿರಂಗ ಪಡಿಸಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ಅವಿನಾಶ್ ರೆಡ್ಡಿಗೆ ಟಿಕೆಟ್ ನೀಡದಂತೆ ಜಗನ್ ಮೋಹನ್ ರೆಡ್ಡಿಯ ಮನವೊಲಿಸುವಂತೆ ಶರ್ಮಿಳಾರಿಗೆ ವಿವೇಕಾನಂದ ಸೂಚಿಸಿದ್ದರು ಎಂದೂ ಶರ್ಮಿಳಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.