×
Ad

ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ; ಸಾಧ್ಯವಿರುವ ಎಲ್ಲ ನೆರವಿನ ಭರವಸೆ

Update: 2024-07-11 21:36 IST

ಎಚ್.ಡಿ.ಕುಮಾರಸ್ವಾಮಿ

ವಿಶಾಖಪಟ್ಟಣಂ: ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಗುರುವಾರ ಇಲ್ಲಿಯ ವಿಶಾಖಪಟ್ಟಣಂ ಉಕ್ಕು ಕಾರ್ಖಾನೆ(ರಾಷ್ಟ್ರೀಯ ಇಸ್ಪಾತ್ ನಿಗಮ ಲಿ.)ಗೆ ಭೇಟಿ ನೀಡಿ,ಅದಕ್ಕೆ ಸಾಧ್ಯವಿರುವ ಎಲ್ಲ ನೆರವಿನ ಭರವಸೆ ನೀಡಿದರು.

ಉದ್ಯೋಗಿಗಳು ಮತ್ತು ಕಾರ್ಮಿಕ ಒಕ್ಕೂಟಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಕಾರ್ಖಾನೆಯ ಮುಚ್ಚುಗಡೆ ಸಾಧ್ಯತೆಯ ಬಗ್ಗೆ ಅವರಲ್ಲಿನ ಕಳವಳಗಳನ್ನು ನಿವಾರಿಸಲು ಮುಂದಾದರು ಮತ್ತು ಕಾರ್ಖಾನೆಯು ಶೇ.100 ಸಾಮರ್ಥ್ಯದಲ್ಲಿ ಉತ್ಪಾದನೆಯನ್ನು ಮುಂದುವರಿಸಲಿದೆ ಎಂದು ಭರವಸೆಯನ್ನು ನೀಡಿದರು.

ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯು ಭಾರತದ ಜಿಡಿಪಿಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಅವರು ಒತ್ತಿ ಹೇಳಿದರು.

ಸಹಾಯಕ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಬಿ.ಶ್ರೀನಿವಾಸ ವರ್ಮಾ ಅವರು ಕುಮಾರಸ್ವಾಮಿ ಜೊತೆಯಲ್ಲಿದ್ದರು.

‘ನಾನು ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಗೆ ಖುದ್ದು ಭೇಟಿಯನ್ನು ನೀಡಿ ಪರಿಶೀಲಿಸಿದ್ದೇನೆ. ಕಾರ್ಖಾನೆಯ ವಿವಿಧ ವಿಭಾಗಗಳಿಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸಿದ್ದೇನೆ. ಹಿರಿಯ ಅಧಿಕಾರಿಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗಳನ್ನು ಪರಿಶೀಲಿಸಿದ್ದೇನೆ ’ ಎಂದು ಭೇಟಿಯ ಬಳಿಕ ಎಕ್ಸ್ ಪೋಸ್ಟ್‌ನಲ್ಲಿ ಕುಮಾರಸ್ವಾಮಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News