×
Ad

ಜಮ್ಮು ಗಡಿಯಲ್ಲಿ ಅಪ್ರಚೋದಿತ ದಾಳಿ; ಪಾಕಿಸ್ತಾನಕ್ಕೆ ಪ್ರಬಲ ಪ್ರತಿಭಟನೆ ಸಲ್ಲಿಸಿದ ಬಿಎಸ್‌ಎಫ್

Update: 2023-10-28 21:51 IST

ಸಾಂದರ್ಭಿಕ ಚಿತ್ರ (PTI)

ಜಮ್ಮು: ಜಮ್ಮುವಿನ ಅರ್ನಿಯಾ ಸೆಕ್ಟರ್‌ನಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿಯ ಮುಂಚೂಣಿ ಠಾಣೆಗಳು ಮತ್ತು ಗ್ರಾಮಗಳ ಮೇಲೆ ಅಪ್ರಚೋದಿತ ಗುಂಡು ಮತ್ತು ಮಾಟ್‌ರ್ ಶೆಲ್‌ಗಳ ದಾಳಿಯ ವಿರುದ್ಧ ಬಿಎಸ್‌ಎಫ್ ಶನಿವಾರ ಪಾಕಿಸ್ತಾನಿ ರೇಂಜರ್ಸ್‌ಗೆ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗುರುವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಪ್ರಮುಖ ಕದನ ವಿರಾಮ ಉಲ್ಲಂಘನೆಯಲ್ಲಿ ಪಾಕಿಸ್ತಾನಿ ರೇಂಜರ್‌ಗಳು ಮಾರ್ಟರ್ ಶೆಲ್ ದಾಳಿಯನ್ನು ನಡೆಸಿದ್ದರು. ಬಿಎಸ್‌ಎಫ್ ಯೊಧರು ಪ್ರತಿದಾಳಿಯನ್ನು ನಡೆಸಿದ್ದು, ಸುಮಾರು ಏಳು ಗಂಟೆಗಳ ಕಾಲ ನಡೆದ ಘರ್ಷಣೆಯಲ್ಲಿ ಓರ್ವ ಯೋಧ ಮತ್ತು ಓರ್ವ ಮಹಿಳೆ ಗಾಯಗೊಂಡಿದ್ದರು.

ಸುಚೇತಗಡದ ಆಕ್ಟ್ರಾಯ್‌ನಲ್ಲಿಯ ಗಡಿ ಠಾಣೆಯಲ್ಲಿ ಒಂದು ಗಂಟೆ ಕಾಲ ನಡೆದ ಕಮಾಂಡರ್ ಮಟ್ಟದ ಸಭೆಯಲ್ಲಿ ಪ್ರತಿಭಟನೆಯನ್ನು ದಾಖಲಿಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೋರ್ವರು ತಿಳಿಸಿದರು.

ಇದು ಕಳೆದ 10 ದಿನಗಳಲ್ಲಿ ಉಭಯ ದೇಶಗಳ ನಡುವಿನ ದ್ವಿತೀಯ ಧ್ವಜ ಸಭೆಯಾಗಿದೆ. ಅ.17ರಂದು ಅರ್ನಿಯಾದಲ್ಲಿ ಇಬ್ಬರು ಬಿಎಸ್‌ಎಫ್ ಸಿಬ್ಬಂದಿಗಳು ಗಡಿಯಾಚೆಯಿಂದ ಗುಂಡು ಹಾರಾಟದಲ್ಲಿ ಗಾಯಗೊಂಡಿದ್ದರು. ಇದು 2003ರ ಕದನ ವಿರಾಮ ಒಪ್ಪಂದಕ್ಕೆ ಬದ್ಧತೆಯನ್ನು ಉಭಯ ದೇಶಗಳು ಫೆಬ್ರವರಿ 2021ರಲ್ಲಿ ನವೀಕರಿಸಿದ ಬಳಿಕ ನಡೆದಿದ್ದ ಮೊದಲ ಕದನ ವಿರಾಮ ಉಲ್ಲಂಘನೆಯಾಗಿತ್ತು.

ಶನಿವಾರದ ಸಭೆಯಲ್ಲಿ ಬಿಎಸ್‌ಎಫ್ ಮತ್ತು ಪಾಕಿಸ್ತಾನಿ ರೇಂಜರ್ಸ್‌ನ ತಲಾ ಏಳು ಅಧಿಕಾರಿಗಳು ಭಾಗವಹಿಸಿದ್ದರು ಮತ್ತು ಗಡಿಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಉಭಯ ಕಡೆಗಳು ಪ್ರಮುಖವಾಗಿ ಬಿಂಬಿಸುವುದರೊಂದಿಗೆ ಸಭೆಯು ಶಾಂತಿಪೂರ್ಣ ವಾತಾವರಣದಲ್ಲಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದರು.

ಈ ಎರಡು ಕದನ ವಿರಾಮ ಉಲ್ಲಂಘನೆಗಳಲ್ಲದೆ,ಅ.21ರಂದು ಪಾಕಿಸ್ತಾನಿ ರೇಂಜರ್‌ಗಳ ಬೆಂಗಾವಲಿನಲ್ಲಿ ಜನರ ಗುಂಪೊಂದು ಅಂತರರಾಷ್ಟ್ರೀಯ ಗಡಿಯ ಸಮೀಪ ಬಂದಿದ್ದು,ಬಿಎಸ್‌ಎಫ್ ಸಿಬ್ಬಂದಿಗಳು ಎರಡು ಸುತ್ತು ಗುಂಡುಗಳನ್ನು ಹಾರಿಸಿ ಅವರನ್ನು ಓಡಿಸಿದ್ದರು.

ಯಾವುದೇ ಪ್ರಚೋದನೆಯಿಲ್ಲದೆ ಪಾಕಿಸ್ತಾನದಿಂದ ಬೆನ್ನುಬೆನ್ನಿಗೆ ನಡೆದಿರುವ ಕದನ ವಿರಾಮ ಉಲ್ಲಂಘನೆಗಳು ಗಡಿ ನಿವಾಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿವೆ. ಗುರುವಾರ ರಾತ್ರಿ ತೀವ್ರ ಶೆಲ್ ದಾಳಿಗಳ ನಡುವೆ ಅವರು ಜೀವಗಳನ್ನು ಉಳಿಸಿಕೊಳ್ಳಲು ತಮ್ಮ ಮನೆಗಳನ್ನು ತೊರೆಯುವಂತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News