×
Ad

"ಗಂಗೆ ನಿಮ್ಮ ಪಾದಗಳನ್ನು ಸ್ಪರ್ಶಿಸುತ್ತಿದ್ದಾಳೆ, ಇದು ನಿಮ್ಮನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತದೆ": ಪ್ರವಾಹ ಪೀಡಿತರಿಗೆ ಹೇಳಿದ ಉತ್ತರ ಪ್ರದೇಶ ಸಚಿವ

‘ನಮ್ಮೊಂದಿಗೆ ಇದ್ದು, ಆಶೀರ್ವಾದ ಪಡೆಯಿರಿ’ ಎಂದು ಪ್ರತಿಕ್ರಿಯಿಸಿದ ಮಹಿಳೆ

Update: 2025-08-06 13:07 IST

ಸಂಜಯ್ ನಿಶಾದ್ (Photo: Facebook/NISHAD Party)

ಲಕ್ನೋ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಗಂಗಾ ನದಿಯುದ್ದಕ್ಕೂ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಪ್ರವಾಹ ಪೀಡಿತ ಕಾನ್ಪುರ ದೇಹತ್‌ಗೆ ಪರಿಶೀಲನೆಗೆ ತೆರಳಿದ ವೇಳೆ ರಾಜ್ಯ ಕ್ಯಾಬಿನೆಟ್ ಸಚಿವ ಸಂಜಯ್ ನಿಶಾದ್ ನೀಡಿರುವ ವಿವಾದಾತ್ಮಕ ಹೇಳಿಕೆ ಟೀಕೆಗೆ ಗುರಿಯಾಗಿದೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ಜವಾಬ್ಧಾರಿಯನ್ನು ನಿಶಾದ್ ಅವರಿಗೆ ವಹಿಸಲಾಗಿತ್ತು. ಕಾನ್ಪುರ ದೇಹತ್‌ನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಸಂಕಷ್ಟವನ್ನು ಸಚಿವರಿಗೆ ಹೇಳಿದ್ದಾರೆ.

ಈ ವೇಳೆ ಸಚಿವ ಸಂಜಯ್ ನಿಶಾದ್, "ನೀವು ಗಂಗೆಯ ಮಕ್ಕಳು, ಗಂಗಾ ನದಿ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ. ಇದು ನಿಮ್ಮನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತದೆ" ಎಂದು ಪ್ರವಾಹ ಪೀಡಿತ ಗ್ರಾಮಸ್ಥರಿಗೆ ಹೇಳಿದ್ದಾರೆ. ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ವೇಳೆ ತಂಡದಲ್ಲಿದ್ದ ಮಹಿಳೆಯೋರ್ವರು ಸಚಿವರ ಹೇಳಿಕೆಗಳನ್ನು ವೃದ್ಧ ಮಹಿಳೆಯೋರ್ವರಿಗೆ ವಿವರಿಸಲು ಪ್ರಯತ್ನಿಸಿದರು. ಈ ವೇಳೆ ಆ ವೃದ್ಧ ಮಹಿಳೆ, ನಮ್ಮ ಜೊತೆ ಇಲ್ಲೇ ಇದ್ದು ಗಂಗಾ ನದಿಯ ಆಶೀರ್ವಾದವನ್ನು ನೀವು ಕೂಡ ಪಡೆದುಕೊಳ್ಳಿ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ನಿಶಾದ್, ಪ್ರವಾಹ ಒಂದು ನೈಸರ್ಗಿಕ ವಿಕೋಪ ಮತ್ತು ಸರಕಾರ ಜನರಿಗೆ ಸಹಾಯ ಮಾಡಲು ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ. ನಾವು ಅವರಿಗೆ ಆಹಾರ ಪೊಟ್ಟಣಗಳು, ಬೇಯಿಸಿದ ಆಹಾರವನ್ನು ನೀಡುತ್ತಿದ್ದೇವೆ. ನಾವು ಅವರಿಗೆ ಧೈರ್ಯವನ್ನು ನೀಡಬೇಕು. ಅದಕ್ಕಾಗಿ ನಾನು ಅವರಿಗೆ ಆ ಮಾತುಗಳನ್ನು ಹೇಳಿದೆ. ನಾವು ನೀರನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಇದು ಒಂದು ದಿನ ಅಥವಾ ಒಂದು ವರ್ಷದ ಸಮಸ್ಯೆಯಲ್ಲ. ನಾನು ಅವರಿಗೆ ಭಾವನಾತ್ಮಕ ಬೆಂಬಲವನ್ನು ನೀಡಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News