×
Ad

ಬಿಡಾಡಿ ದನಗಳ ಉಪಟಳ: ಉತ್ತರ ಪ್ರದೇಶ ಸಚಿವರಿಗೆ ದನಗಳಿಂದಲೇ ಮುತ್ತಿಗೆ ಹಾಕಿಸಿದ ನಾಗರಿಕರು!

Update: 2023-08-19 14:21 IST

Photo credit: IANS

ಬರೇಲಿ: ಬಿಡಾಡಿ ದನಗಳ ಉಪಟಳವನ್ನು ಪ್ರತಿಭಟಿಸಿ ಸ್ಥಳೀಯ ನಿವಾಸಿಗಳು ಉತ್ತರ ಪ್ರದೇಶದ ಪಶು ಸಂಗೋಪನಾ ಸಚಿವ ಧರ್ಮಪಾಲ್ ಸಿಂಗ್ ಬೆಂಗಾವಲು ಪಡೆ ಎದುರು ಬಿಡಾಡಿ ದನಗಳನ್ನು ನಿಲ್ಲಿಸಿದ್ದರಿಂದ ಅವರು ಮುಜುಗರಕ್ಕೀಡಾದ ಘಟನೆ ಗುರುವಾರ ನಡೆದಿದೆ. ಸಚಿವರು ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ದುಬೆ ಅವರೊಂದಿಗೆ ಆಮ್ಲಾದಲ್ಲಿ ನೂತನ ಪಶು ಚಿಕಿತ್ಸಾಲಯದ ಶಿಲಾನ್ಯಾಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು thenewsminute.com ವರದಿ ಮಾಡಿದೆ.

ಧರ್ಮಪಾಲ್ ಸಿಂಗ್ ಅವರು ಬರೇಲಿ ಜಿಲ್ಲೆಯ ಆಮ್ಲಾ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಘಟನೆಯಿಂದ ಸಚಿವರ ಬೆಂಗಾವಲು ಪಡೆಯ ಸಿಬ್ಬಂದಿಗಳು ಸುಮಾರು 40 ನಿಮಿಷಗಳ ಕಾಲ ರಸ್ತೆಯ ನಡುವೆ ಸಿಲುಕಿಕೊಂಡರು. ಘಟನೆಯ ಮಾಹಿತಿ ಪೊಲೀಸ್ ಠಾಣೆಗೆ ತಲುಪುತ್ತಿದ್ದಂತೆಯೇ ಗ್ರಾಮಸ್ಥರನ್ನು ಸಮಾಧಾನಿಸಲು ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಇದಕ್ಕೂ ಮುನ್ನ ಬಿಡಾಡಿ ದನಗಳಿಂದ ಈ ಭಾಗದಲ್ಲಿನ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಸಚಿವರಿಗೆ ಮಾಹಿತಿ ನೀಡಿದರು.

ಬಿಡಾಡಿ ದನಗಳ ಉಪಟಳವನ್ನು ನಿವಾರಿಸಲು ರಾಜ್ಯ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂಬಂಧ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ಹಾಗೂ ಪೊಲೀಸರು ನೀಡಿದ ನಂತರ ಗ್ರಾಮಸ್ಥರು ಬಿಡಾಡಿ ದನಗಳನ್ನು ರಸ್ತೆಯಿಂದ ದೂರ ಅಟ್ಟುವ ಮೂಲಕ ಸಚಿವರ ಬೆಂಗಾವಲು ಪಡೆಯು ಮುಂದೆ ಸಾಗಲು ಅವಕಾಶ ಮಾಡಿಕೊಟ್ಟರು.

ಈ ವರ್ಷದ ಜನವರಿ ತಿಂಗಳಲ್ಲೂ ಬಿಡಾಡಿ ದನಗಳ ಉಪಟಳವನ್ನು ಪ್ರತಿಭಟಿಸಿ, ಬಿಡಾಡಿ ದನಗಳನ್ನು ಬದೌನ್-ಮೀರತ್ ರಾಷ್ಟ್ರೀಯ ಹೆದ್ದಾರಿ ಮೇಲೆ ಗ್ರಾಮಸ್ಥರು ಹಿಂಡುಗೂಡಿಸಿದ್ದರು ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News