ಚಂದ್ರಯಾನ ಭೂಮಿಗೆ ವಾಪಸಾದಾಗ ಇಡೀ ದೇಶ ಸ್ವಾಗತಿಸಬೇಕೆಂದು ಹೇಳಿ ಟ್ರೋಲಿಗೊಳಗಾದ SBSP ಮುಖ್ಯಸ್ಥ
ಓಂ ಪ್ರಕಾಶ್ ರಾಜಭರ್ (PTI)
ಹೊಸದಿಲ್ಲಿ: ಉತ್ತರ ಪ್ರದೇಶದ ರಾಜಕಾರಣಿ, ಸುಹೈಲ್ ದೇವ್ ಭಾರತೀಯ ಸಮಾಜ ಪಕ್ಷದ (ಎಸ್ ಬಿಎಸ್ ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜಭರ್ ಅವರು, ಚಂದ್ರಯಾನ-3 ಭೂಮಿಯ ಮೇಲೆ ಕಾಲಿಟ್ಟಾಗ ಇಡೀ ದೇಶ ಅದನ್ನು ಸ್ವಾಗತಿಸಬೇಕು ಎಂದು ಹೇಳಿದ್ದಾರೆ.
ಇದರೊಂದಿಗೆ ಚಂದ್ರಯಾನ ಕುರಿತ ತಮ್ಮ ಹೇಳಿಕೆಗಳಿಂದ ಪ್ರಮಾದ ಸೃಷ್ಟಿಸಿ ಟ್ರೋಲಿಗೊಳಗಾದ ರಾಜಕಾರಣಿಗಳ ಪಟ್ಟಿಗೆ ರಾಜಭರ್ ಕೂಡ ಸೇರಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು “ಚಂದ್ರಯಾನದ ಯಶಸ್ಸಿಗೆ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ನಾಳೆ ಅದು ಭೂಮಿಗೆ ಸುರಕ್ಷಿತವಾಗಿ ಆಗಮಿಸುವಾಗ, ಇಡೀ ದೇಶ ಅದನ್ನು ಸ್ವಾಗತಿಸಬೇಕು,” ಎಂದು ರಾಜಭರ್ ಹೇಳಿದರು.
ರಾಜಭರ್‌ಗೆ ಮುನ್ನ ರಾಜಸ್ಥಾನದ ಕ್ರೀಡಾ ಸಚಿವ ಅಶೋಕ್ ಚಂದ್ನ ಅವರು ಚಂದ್ರಯಾನ್ ಭಾಗವಾಗಿರುವ “ಪ್ರಯಾಣಿಕರನ್ನು” ಅಭಿನಂದಿಸಿದ್ದರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಗನಯಾತ್ರಿ ರಾಕೇಶ್ ಶರ್ಮ ಮತ್ತು ನಟ-ನಿರ್ದೇಶಕ ರಾಕೇಶ್ ರೋಶನ್ ಹೆಸರುಗಳ ಕುರಿತು ಗೊಂದಲಕ್ಕೀಡಾಗಿ ಟ್ರೋಲಿಗೊಳಗಾಗಿದ್ದರು.