×
Ad

ರಾಷ್ಟ್ರೀಯ ಭದ್ರತೆ,ಕಾರ್ಯವಿಧಾನ ದೋಷಗಳನ್ನು ಉಲ್ಲೇಖಿಸಿ ಡಬ್ಲ್ಯುಟಿಒದಲ್ಲಿ ಭಾರತದ ನೋಟಿಸ್ ತಿರಸ್ಕರಿಸಿದ ಅಮೆರಿಕ

Update: 2025-06-03 16:30 IST

ಡೊನಾಲ್ಡ್ ಟ್ರಂಪ್ | PTI

ಹೊಸದಿಲ್ಲಿ : ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಅಮೆರಿಕದ ಸುಂಕಗಳ ವಿರುದ್ಧ ಪ್ರತೀಕಾರ ಕ್ರಮವನ್ನು ಪ್ರಸ್ತಾವಿಸಿ ಭಾರತವು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ)ಗೆ ನೀಡಿದ್ದ ನೋಟಿಸನ್ನು ಅಮೆರಿಕವು ತಿರಸ್ಕರಿಸಿದೆ.

ರಾಷ್ಟ್ರೀಯ ಭದ್ರತೆಯ ಕಾರಣಗಳಿಂದ ಸುಂಕವನ್ನು ಹೇರಲಾಗಿದೆ ಎಂದು ತಿಳಿಸಿರುವ ಅಮೆರಿಕ, ಭಾರತದ ಪ್ರಕರಣದಲ್ಲಿ ‘ಕಾರ್ಯವಿಧಾನ ದೋಷ’ಗಳನ್ನು ಸಹ ಬೆಟ್ಟು ಮಾಡಿದೆ ಎಂದು indianexpress.com ವರದಿ ಮಾಡಿದೆ.

ತನ್ನ ಮೇ 23ರ ಟಿಪ್ಪಣಿಯಲ್ಲಿ ಅಮೆರಿಕವು, ಭಾರತವು ಉಕ್ಕು ಮತ್ತು ಅಲ್ಯುಮಿನಿಯಂ ಮೇಲಿನ ಸುಂಕಗಳನ್ನು ಸುರಕ್ಷತಾ ಕ್ರಮಗಳೆಂದು ತಪ್ಪಾಗಿ ಪರಿಗಣಿಸಿದೆ. ಆಮದುಗಳನ್ನು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಪರಿಗಣಿಸಿದರೆ ಅವುಗಳ ಮೇಲೆ ಸುಂಕ ಹೇರಲು ಅವಕಾಶವಿರುವ ಅಮೆರಿಕದ ಕಾನೂನಿನ ಕಲಂ 232ರಡಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

‘ಸುಂಕಗಳನ್ನು ಸುರಕ್ಷತಾ ಕ್ರಮಗಳೆಂದು ನಾವು ಪರಿಗಣಿಸುವುದಿಲ್ಲ, ಹೀಗಾಗಿ ಸುರಕ್ಷತಾ ಒಪ್ಪಂದದಡಿ ಕಲಂ 232 ಸುಂಕಗಳನ್ನು ಅಮೆರಿಕವು ಚರ್ಚಿಸುವುದಿಲ್ಲ ’ಎಂದು ಅದು ಭಾರತದ ಸವಾಲಿಗೆ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ ಡಬ್ಲ್ಯುಟಿಒ ಕೌನ್ಸಿಲ್ ಫಾರ್ ಟ್ರೇಡ್ ಇನ ಗುಡ್ಸ್‌ಗೆ ತಿಳಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ಕಿನ ಮೇಲಿನ ಸುಂಕವನ್ನು ಶೇ.50ಕ್ಕೆ ದ್ವಿಗುಣಗೊಳಿಸುವುದಾಗಿ ಶುಕ್ರವಾರ ಘೋಷಿಸಿದ್ದು,ಇದನ್ನು ದುರದೃಷ್ಟಕರ ಎಂದೂ ರಫ್ತುದಾರರು ಬಣ್ಣಿಸಿದ್ದಾರೆ.

‘ಎ.16, 2025ರ ನಮ್ಮ ಉತ್ತರದಲ್ಲಿ ಈ ಸುಂಕಗಳ ಕುರಿತು ಚರ್ಚಿಸುವ ನಮ್ಮ ಪ್ರಸ್ತಾವವನ್ನು ಭಾರತವು ಒಪ್ಪಿಕೊಂಡಿಲ್ಲ ಮತ್ತು ಸುರಕ್ಷತಾ ಕ್ರಮಗಳ ಒಪ್ಪಂದದಡಿ ಬಾಧ್ಯತೆಗಳನ್ನು ಪಾಲಿಸಿಲ್ಲ. ಒಪ್ಪಂದವು ಈಗ ಪ್ರಶ್ನೆಯಲ್ಲಿರುವ ಸುಂಕಗಳಿಗೆ ಅನ್ವಯಿಸುತ್ತದೆ ಎಂದು ಅದು ತಪ್ಪಾಗಿ ವಾದಿಸುತ್ತಿದೆ’ ಎಂದು ಅಮೆರಿಕ ತನ್ನ ಟಿಪ್ಪಣಿಯಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News