×
Ad

ಉತ್ತರ ಪ್ರದೇಶ: ಮಸೀದಿಯ ಗೋಡೆಯ ಮೇಲೆ ʼಜೈ ಶ್ರೀರಾಂʼ ಬರೆದು, ಗೋಡೆಗೆ ಹಾನಿಯೆಸಗಿದ ಗುಂಪು

Update: 2023-12-25 23:28 IST

Photograb: @Millat_Times \ X 

ಆಲಿಗಢ: ಉತ್ತರ ಪ್ರದೇಶದ ಆಲಿಗಢದ ಮಸೀದಿಯೊಂದರ ಗೋಡೆಯ ಮೇಲೆ ಗುಂಪೊಂದು ʼಜೈ ಶ್ರೀರಾಂʼ ಎಂದು ಬರೆದು, ನಂತರ ಗೋಡೆಗೆ ಹಾನೆಯೆಸಗಿದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಘಟನೆಯು ಆಲಿಗಢದ ವಿಭಜಕದ ಬಳಿಯ ದಿಲ್ಲಿ ಗೇಟ್ ಬಳಿ ನಡೆದಿದೆ.

ಇದರ ಬೆನ್ನಿಗೇ ಸಮಾಜವಾದಿ ಪಕ್ಷದ ನಿಯೋಗವೊಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಮೃಗಾಂಕ್ ಶೇಖರ್ ಪಾಠಕ್ ಅವರನ್ನು ಭೇಟಿಯಾಗಿ ಈ ವಿಷಯದ ಕುರಿತು ಔಪಚಾರಿಕ ದೂರು ಸಲ್ಲಿಸಿದ್ದು, ಕೋಮು ಸೌಹಾರ್ದಕ್ಕೆ ಧಕ್ಕೆ ತಂದಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು.

ನಿಯೋಗದ ಸದಸ್ಯರಲ್ಲೊಬ್ಬರಾಗಿದ್ದ ಸಮಾಜವಾದಿ ಪಕ್ಷದ ನಾಯಕ ಮನೋಜ್ ಯಾದವ್, ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಕೆಲವು ನಿರ್ದಿಷ್ಟ ಸಮಾಜವಿರೋಧಿ ಶಕ್ತಿಗಳು ನಗರದ ಸೌಹಾರ್ದ ವಾತಾವರಣವನ್ನು ಹದಗೆಡಿಸಿವೆ ಎಂದು ಆರೋಪಿಸಿದ್ದು, ಒಂದು ವೇಳೆ ದುಷ್ಕರ್ಮಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಈ ಕುರಿತು ಔಪಚಾರಿಕ ವರದಿಯನ್ನು ಸಲ್ಲಿಸಿದ್ದಾರೆ. ವಿಡಿಯೊ ತುಣುಕುಗಳ ಮೂಲಕ ಕೃತ್ಯದಲ್ಲಿ ಭಾಗಿಯಾಗಿದ್ದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಾಠಕ್ ತಿಳಿಸಿದ್ದಾರೆ.

ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News