×
Ad

ಉತ್ತರ ಪ್ರದೇಶ | ತಾಯಿಯ ಹತ್ಯೆಗೈದಿರುವುದನ್ನು ಕೊನೆಗೂ ಒಪ್ಪಿಕೊಂಡ ಅಪ್ರಾಪ್ತ ಬಾಲಕ!

Update: 2024-12-12 21:27 IST

ಸಾಂದರ್ಭಿಕ ಚಿತ್ರ

ಗೋರಖ್‌ಪುರ : ತನ್ನ ತಾಯಿ ಸಾವಿಗೆ ಸಂಬಂಧಿಸಿ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುತ್ತಲೇ ಇದ್ದ, ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಕೊನೆಗೂ ಆಕೆಯನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆಂದು ಉತ್ತರಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ.

11 ನೇ ತರಗತಿಯ ವಿದ್ಯಾರ್ಥಿಯಾದ ಆರೋಪಿ ಬಾಲಕನು ವಿಜ್ಞಾನಿಯೊಬ್ಬರ ಪುತ್ರನಾಗಿದ್ದಾನೆ. ಡಿ.3ರಂದು ಗೋರಖ್‌ ಪುರದಲ್ಲಿರುವ ತಮ್ಮ ಮನೆಯಲ್ಲಿ ತಾಯಿ ಆರತಿ ವರ್ಮಾ ಅವರ ತಲೆಯನ್ನು ಗೋಡೆ ಜಜ್ಜಿ ಕೊಲೆ ಮಾಡಿರುವುದಾಗಿ ಆತ ಗುರುವಾರ ತಪ್ಪೊಪ್ಪಿಕೊಂಡಿದ್ದಾನೆ. ಇದಕ್ಕೂ ಮುನ್ನ ಆತ ಆಕೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವುದಾಗಿ ಆತ ತನ್ನ ತಂದೆ ಹಾಗೂ ಪೊಲೀಸರಿಗೆ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದನು.

ಆದರೆ ಪೊಲೀಸರು ಆತನನ್ನು ವಿಸ್ತೃತವಾಗಿ ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಂತೆಂದು ಪೊಲೀಸ್ ಅಧೀಕ್ಷಕ (ಉತ್ತರ) ಜಿತೇಂದ್ರ ಕುಮಾರ್ ಶ್ರೀವಾತ್ಸವ ಅವರು ತಿಳಿಸಿದ್ದಾರೆ.

‘‘ಡಿಸೆಂಬರ್ 3ರಂದು ತಾನು ತಾಯಿಯೊಂದಿಗೆ ವಾಗ್ವಾದ ನಡೆಸಿದ ಸಂದರ್ಭ ಆಕೆಯನ್ನು ಗೋಡೆಯತ್ತ ದೂಡಿದ್ದರಿಂದ ತಲೆಗೆ ಪೆಟ್ಟಾಗಿ ಆಕೆ ಮೃತಪಟ್ಟಿರುವುದಾಗಿ ಬಾಲಕನು ವಿಚಾರಣೆಯ ವೇಳೆ ತಿಳಿಸಿರುವುದಾಗಿ ಶ್ರೀವಾತ್ಸವ ಹೇಳಿದ್ದಾರೆ. ಮೃತ ಆರತಿ ಅವರ ಪತಿ ರಾಮ್ ಮಿಲನ್ ಅವರು ಚೆನ್ನೈನ ಭಾಭಾ ಅಣುಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದು, ಅವರಿಗೆ ನಾಲ್ಕು ದಿನಗಳ ಆನಂತರವಷ್ಟೇ ಪತ್ನಿಯ ಸಾವಿನ ವಿಷಯ ತಿಳಿದುಬಂದಿದೆ. ಎರಡು ದಿನಗಳಿಂದ ಪತ್ನಿಯ ಪೋನ್ ಸ್ವಿಚ್ ಆಫ್ ಆಗಿದ್ದರಿಂದ ಮಿಲನ್ ಅವರು ಡಿ.7ರಂದು ತನ್ನ ಅತ್ತೆಗೆ ಕರೆ ಮಾಡಿ ಮನೆ ಕಡೆ ನೋಡಿ ಬರುವಂತೆ ತಿಳಿಸಿದರು. ಆದರೆ ಮನೆ ಬೀಗಹಾಕಿರುವುದಾಗಿ ಅತ್ತೆ, ಮಿಲನ್‌ಗೆ ಮಾಹಿತಿ ನೀಡಿದ್ದರು. ಆ ದಿನ ಸಂಜೆ ಮಿಲನ್ ಗೋರಖ್‌ಪುರಕ್ಕೆ ಹಿಂತಿರುಗಿ ಮನೆಬಾಗಿಲು ತೆರೆದಾಗ ಆರತಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದರು. ಅವರ ಪುತ್ರ ಸಮೀಪದ ಶಿವದೇವಾಲಯದಲ್ಲಿ ಪತ್ತೆಯಾಗಿದ್ದ. ತನ್ನ ತಾಯಿ ಕೆಳಗೆ ಬಿದ್ದು ಸಾವನ್ನಪ್ಪಿರುವುದಗಿ ಆತ ತಂದೆಗೆ ಮತ್ತು ಪೊಲೀಸರಿಗೆ ಆರಂಭದಲ್ಲಿ ಹೇಳಿದ್ದ. ಇದರಿಂದ ಭಯಭೀತಗೊಂಡು ತಾನು ಮನೆಗೆ ಬೀಗ ಜಡಿದು, ನಾಲ್ಕುದಿನಗಳಿಂದ ಗೊತ್ತುಗುರಿಯಿಲ್ಲದೆ ಅಲೆದಾಡುತ್ತಿದ್ದೆನೆಂದು ಆತ ಸುಳ್ಳು ಹೇಳಿದ್ದ.

ಆದಾಗ್ಯೂ ಮರಣೋತ್ತರ ಪರೀಕ್ಷೆಯ ವರದಿಯು ಬಾಲಕನ ಹೇಳಿಕೆಗೆ ಪೂರಕವಾಗಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೊಲೀಸರು ಆತನನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News