ಉತ್ತರ ಪ್ರದೇಶ: ಲೋಕಸಭಾ ಚುನಾವಣೆಗೆ ಭೀಮ್ ಆರ್ಮಿಯ ಚಂದ್ರಶೇಖರ್ ನಾಮಪತ್ರ ಸಲ್ಲಿಕೆ
Update: 2024-03-23 22:18 IST
ಚಂದ್ರಶೇಖರ್ ಆಝಾದ್ | Photo: PTI
ಲಕ್ನೊ : ಅಝಾದ್ ಸಮಾಜ ಪಕ್ಷದ ನಾಯಕ ಚಂದ್ರಶೇಖರ್ ಆಝಾದ್ ಹಾಗೂ ಸಮಾಜವಾದಿ ಪಕ್ಷದ ನಾಯಕ ಮನೋಜ್ ಕುಮಾರ್ ಅವರು ಶುಕ್ರವಾರ ಉತ್ತರಪ್ರದೇಶದ ನಾಗಿನಾ (ಮೀಸಲು) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತಮ್ಮ ನಾಮಪತ್ರ ಸಲ್ಲಿಸಿದ ಇತರ ಇಬ್ಬರು ಅಭ್ಯರ್ಥಿಗಳೆಂದರೆ ಮೊರದಾಬಾದ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್)ನ ಹರ್ ಕಿಶೋರ್ ಸಿಂಗ್ ಹಾಗೂ ರಾಮ್ಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ರಾಷ್ಟ್ರೀಯ ಸಮಾಜ ದಳ್ (ಆರ್)ನ ಸಂಜಯ್ ಕುಮಾರ್ ಭಾರ್ತಿ .
ಉತ್ತರಪ್ರದೇಶದಲ್ಲಿ ಎಪ್ರಿಲ್ 19ರಂದು ನಡೆಯಲಿರುವ ಮೊದಲ ಹಂತದ ಲೋಕಸಭೆ ಚುನಾವಣೆಗೆ ಇದುವರೆಗೆ ಕೇವಲ ನಾಲ್ಕು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆಯಲಿರುವ 7 ಹಂತಗಳ ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆ ಬುಧವಾರ ಆರಂಭವಾಗಿದೆ.