ಉತ್ತರ ಪ್ರದೇಶ | ವಿವಾದಾತ್ಮಕ ಪೋಸ್ಟ್; ಶಹಾಜಹಾನ್ ಪುರದಲ್ಲಿ ಕೋಮು ಉದ್ವಿಗ್ನತೆ
PC : X/@indiarecapnews
ಲಕ್ನೋ, ಸೆ. 15: ಪ್ರವಾದಿ ಮುಹಮ್ಮದ್ ಹಾಗೂ ಪವಿತ್ರ ಕುರ್‌ಆನ್ ಅನ್ನು ಗುರಿಯಾಗಿರಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ ಕುರಿತು ಭುಗಿಲೆದ್ದ ಪ್ರತಿಭಟನೆಗೆ ಸಂಬಂಧಿಸಿ ಶಹಾಜಹಾನ್ ಪುರ ಜಿಲ್ಲಾ ಪೊಲೀಸರು ಸೋಮವಾರ 200 ಮಂದಿ ಅನಾಮಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಹಾಗೂ ಕುರ್‌ಆನ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ವಿಷಯವನ್ನು ಪೋಸ್ಟ್ ಮಾಡಿರುವುದಕ್ಕಾಗಿ ಕೇಂದ್ರ ಉತ್ತರಪ್ರದೇಶದಿಂದ 45 ವರ್ಷದ ವ್ಯಕ್ತಿಯೋರ್ವನನ್ನು ಬಂಧಿಸಿದ ಬಳಿಕ ಈ ಘಟನೆ ನಡೆದಿದೆ.
ಈ ವ್ಯಕ್ತಿಯನ್ನು ಬಂಧಿಸಿದ ಬಳಿಕ ಸುಮಾರು ರಾತ್ರಿ 9 ಗಂಟೆಗೆ ಹಲವರು ಪೊಲೀಸ್ ಠಾಣೆಗೆ ನುಗ್ಗಲು ಪ್ರಯತ್ನಿಸಿದರು ಹಾಗೂ ಅವಹೇಳನಕಾರಿ ಪೋಸ್ಟ್‌ನ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಕೂಡಲೇ ಹಿಂಸಾಚಾರಕ್ಕೆ ತಿರುಗಿತು, ಕೆಲವು ಪ್ರತಿಭಟನಕಾರರು ಎರಡು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದರು.
ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ಜನರಿಗೆ ತಿಳಿಸಿದರೂ ಅವರು ಹಿಂದೆ ಸರಿಯಲು ನಿರಾಕರಿಸಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂದು ಶಹಾಜಹಾನಪುರದ ಪೊಲೀಸ್ ಅಧೀಕ್ಷಕ ರಾಜೇಶ್ ದ್ವಿವೇದಿ ಹೇಳಿದ್ದಾರೆ.
ಅನಂತರ ಪ್ರತಿಭಟನಕಾರರು ಲಾಲ್ ಇಮ್ಲಿ ಕ್ರಾಸಿಂಗ್ ನಲ್ಲಿ ರಸ್ತೆ ತಡೆ ನಡೆಸಿದರು. ಅವರನ್ನು ಮನವೊಲಿಸಿದ ಬಳಿಕ ರಸ್ತೆ ತಡೆ ತೆರವುಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.
ಸದಾರ್ ಪೊಲೀಸ್ ಹೊರ ಠಾಣೆಯ ಉಸ್ತುವಾರಿ ಶಿವಂ ಅಗರ್ವಾಲ್ ದಾಖಲಿಸಿದ ದೂರಿನ ಆಧಾರದಲ್ಲಿ ಶುಕ್ರವಾರದ ಪ್ರತಿಭಟನೆಯಲ್ಲಿ ಪಾಲ್ಗೊಂಡ 200 ಅನಾಮಿಕರ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಲಾಗಿದೆ ಎಂದು ದ್ವಿವೇದಿ ತಿಳಿಸಿದ್ದಾರೆ.
ಹಿಂದೂ ದೇವರುಗಳ ಬಗ್ಗೆ ಫೇಸ್‌ಬುಕ್ ನಲ್ಲಿ ಅಸಭ್ಯ ವಿಷಯ ಪೋಸ್ಟ್ ಮಾಡಿದ ಮಹಿಳೆಯೋರ್ವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಈ ಪೋಸ್ಟ್‌ಗಳನ್ನು ಹಂಚಿಕೊಂಡಿರುವುದಕ್ಕೆ ಅಥವಾ ಪ್ರಚಾರ ಮಾಡಿರುವುದಕ್ಕೆ ಇತರ ಕೆಲವರು ಕಾನೂನು ಕ್ರಮಕ್ಕೆ ಒಳಪಡಲಿದ್ದಾರೆ
ಶಾಹಜಹಾನ್‌ಪುರದಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ನಗರಾದಾದ್ಯಂತ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧೀಕ್ಷರು ತಿಳಿಸಿದ್ದಾರೆ.
ಈ ನಡುವೆ , ಪೊಲೀಸ್ ತಂಡಗಳು ಮಾರುಕಟ್ಟೆ ಪ್ರದೇಶದಲ್ಲಿ ಧ್ವಜ ಮೆರವಣಿಗೆ ಮುಂದುವರಿಸಿದೆ.