ಉತ್ತರ ಪ್ರದೇಶ: ದೊಣ್ಣೆಯಿಂದ ಥಳಿಸಿ ದಂಪತಿಯ ಹತ್ಯೆ
ಸಾಂದರ್ಭಿಕ ಚಿತ್ರ
ಲಕ್ನೊ: ದಂಪತಿಯನ್ನು ನೆರೆಯವರು ಕಬ್ಬಿಣದ ರಾಡ್ ಹಾಗೂ ದೊಣ್ಣೆಯಿಂದ ಥಳಿಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಮೃತಪಟ್ಟವರನ್ನು ಅಬ್ಬಾಸ್ ಹಾಗೂ ಕಮರುಲ್ ನಿಶಾ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹರಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೆಪುರ ಗ್ರಾಮದಲ್ಲಿ ಈ ಘಟನೆ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಸ್ವೀಕರಿಸಿದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಹಾಗೂ ತನಿಖೆ ಆರಂಭಿಸಿದ್ದಾರೆ. ದಾಳಿಯಿಂದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಲ್ಲಾ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಸೀತಾಪುರ ಪೊಲೀಸ್ ಅಧೀಕ್ಷಕ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ. ಅಬ್ಬಾಸ್ ಅವರ ಪುತ್ರ ನೆರೆ ಮನೆಯ ಯುವತಿಯೊಂದಿಗೆ ಕೆಲವು ವರ್ಷಗಳ ಹಿಂದೆ ಪರಾರಿಯಾಗಿದ್ದ. ಈ ವಿಚಾರ ಶುಕ್ರವಾರ ಎರಡು ಕುಟುಂಬಗಳ ನಡುವಿನ ಜಗಳಕ್ಕೆ ಕಾರಣವಾಗಿತ್ತು ಎಂದು ಮಿಶ್ರಾ ತಿಳಿಸಿದ್ದಾರೆ.
‘‘ಈ ಬಗ್ಗೆ ಅಬ್ಬಾಸ್ ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿತ್ತು ಹಾಗೂ ಆತನನ್ನು ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಆತ ಕೆಲವು ದಿನಗಳ ಹಿಂದೆ ಕಾರಾಗೃಹದಿಂದ ಬಿಡುಗಡೆಯಾದಾಗ, ಈ ಕುಟುಂಬಗಳ ನಡುವೆ ಮತ್ತೆ ಜಗಳ ಆರಂಭವಾಯಿತು’’ ಎಂದು ಅವರು ತಿಳಿಸಿದ್ದಾರೆ. ‘‘ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಹಾಗೂ ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ’’ ಎಂದು ಮಿಶ್ರಾ ಹೇಳಿದ್ದಾರೆ.