ಉತ್ತರಪ್ರದೇಶ: ದಲಿತ ವ್ಯಕ್ತಿಯ ಕಿವಿಯಲ್ಲಿ ಮೂತ್ರ ವಿಸರ್ಜನೆ, ಇಬ್ಬರು ಆರೋಪಿಗಳ ಬಂಧನ
Photo: PTI
ಲಕ್ನೋ: ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ತನ್ನ ದಲಿತ ಸ್ನೇಹಿತನ ಕಿವಿಯಲ್ಲಿ ಮೂತ್ರ ವಿಸರ್ಜಿಸುತ್ತಿರುವ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿಯೂ ಇಂತಹುದೇ ಘಟನೆ ನಡೆದಿತ್ತು.
ಸೋನಭದ್ರಾ ಜಿಲ್ಲೆಯ ಘಾಟಿಹಟಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ತಿಳಿಸಿದ ಎಸ್ಪಿ ಯಶವೀರ ಸಿಂಗ್ ಅವರು, ಆರೋಪಿಗಳಾದ ಜವಾಹರ ಪಟೇಲ ಮತ್ತು ಇನ್ನೋರ್ವ ವ್ಯಕ್ತಿ ಹಾಗೂ ಗುಲಾಬ ಕೋಲ್ ಪರಸ್ಪರ ಸ್ನೇಹಿತರಾಗಿದ್ದು,ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಮೂವರೂ ಒಟ್ಟಿಗೆ ಮದ್ಯಪಾನ ಮಾಡಿದ್ದು,ಈ ವೇಳೆ ಗುಲಾಬ್ ಜೊತೆ ಜಗಳವಾಡಿದ ಪಟೇಲ್ ಆತನನ್ನು ಥಳಿಸಿದ ಬಳಿಕ ಆತನ ಕಿವಿಯಲ್ಲಿ ಮೂತ್ರ ವಿಸರ್ಜಿಸಿದ್ದ ಎಂದು ಹೇಳಿದರು. ಎರಡನೇ ಆರೋಪಿಯ ಹೆಸರನ್ನು ಅವರು ಬಹಿರಂಗಗೊಳಿಸಲಿಲ್ಲ.
ಇಬ್ಬರೂ ಆರೋಪಿಗಳನ್ನು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು,14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಗುಲಾಬ್ ಮದ್ಯದ ಅಮಲಿನಲ್ಲಿದ್ದರಿಂದ ತನ್ನ ಕಿವಿಯಲ್ಲಿ ಮೂತ್ರ ವಿಸರ್ಜಿಸಿದ್ದು ಆತನ ಅರಿವಿಗೆ ಬಂದಿರಲಿಲ್ಲ ಎಂದು ಸಿಂಗ್ ತಿಳಿಸಿದರು.
ಆರೋಪಿಗಳು ಒಬಿಸಿ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ.
ಘಟನೆಯನ್ನು ವೀಡಿಯೊ ಚಿತ್ರೀಕರಿಸಿದ್ದ ವ್ಯಕ್ತಿ ಅದನ್ನು ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು,ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದರು.