×
Ad

ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದವರನ್ನು ಕಾನೂನುಬಾಹಿರವಾಗಿ ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸುತ್ತಿದ್ದಾರೆ : ಟಿಎಂಸಿ ಸಂಸದ ಸಾಕೇತ್ ಗೋಖಲೆ ಆರೋಪ

Update: 2024-07-22 19:13 IST

 ಸಾಕೇತ್ ಗೋಖಲೆ | PC : PTI 

ಹೊಸದಿಲ್ಲಿ: ಕೇವಲ ಫೆಲೆಸ್ತೀನ್ ಧ್ವಜವನ್ನು ಬೀಸಿದ್ದಕ್ಕೆ ಅಥವಾ ಪ್ರದರ್ಶಿಸಿದ ಮಾತ್ರಕ್ಕೇ ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಂಥ ರಾಜ್ಯಗಳಲ್ಲಿ ಅಂತಹ ವ್ಯಕ್ತಿಗಳನ್ನು ಬಂಧಿಸಲಾಗುತ್ತಿದೆ ಮತ್ತು ಅಂಥವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಸಾಕೇತ್ ಗೋಖಲೆ, "ಭಾರತವು ಎರಡು ರಾಷ್ಟ್ರಗಳ ಪರಿಹಾರವನ್ನು ಬೆಂಬಲಿಸುತ್ತೇವೆ ಎಂದು ಅಧಿಕೃತವಾಗಿ ಘೋಷಿಸಿದೆ. ಫೆಲೆಸ್ತೀನ್‌‌ನ ರಾಷ್ಟ್ರ ಸ್ಥಾನಮಾನವನ್ನು ಮಾನ್ಯ ಮಾಡುತ್ತೇವೆ ಎಂದು ಹೇಳಿದೆ. ಈ ವಿಷಯದಲ್ಲಿ ನಮ್ಮ ವಿದೇಶಾಂಗ ನೀತಿಯು ಸ್ಥಿರವಾಗಿದೆ ಹಾಗೂ ಹಾಲಿ ಸರಕಾರದ ಅವಧಿಯಲ್ಲೂ ಮುಂದುವರಿದಿದೆ" ಎಂದು ಹೇಳಿದ್ದಾರೆ.

ಇದರ ಹೊರತಾಗಿಯೂ, ಫೆಲೆಸ್ತೀನ್ ಪರ ಧ್ವಜ ಬೀಸಿದ್ದಕ್ಕೆ ಅಥವಾ ಧ್ವಜ ಪ್ರದರ್ಶಿಸಿದ್ದಕ್ಕೆ ಅಥವಾ ಫೆಲೆಸ್ತೀನ್ ಪರ ಬೆಂಬಲ ಸೂಚಿಸಿದ ಮಾತ್ರಕ್ಕೆ, ಅಂತಹ ವ್ಯಕ್ತಿಗಳನ್ನು ಪೊಲೀಸ್ ಪಡೆಗಳು ಬಂಧಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Full View

ಇದು ಕೇವಲ ಪೊಲೀಸ್ ಅಧಿಕಾರದ ದುರುಪಯೋಗ ಮಾತ್ರವಲ್ಲ, ಬದಲಿಗೆ ಭಾರತದ ವಿದೇಶಾಂಗ ನೀತಿಗೆ ವ್ಯತಿರಿಕ್ತವಾಗಿ ಪೊಲೀಸರು ವರ್ತಿಸುತ್ತಿರುವ ತೀರಾ ಗಂಭೀರ ಸ್ಥಿತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಾನು ಈ ಕೆಳಕಂಡ ಪ್ರಶ್ನೆಗಳನ್ನು ಕೇಳಿ ಗೃಹ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ:

1. ಫೆಲೆಸ್ತೀನ್ ಧ್ವಜಗಳನ್ನು ಬೀಸುವುದು ಅಥವಾ ಪ್ರದರ್ಶಿಸುವುದು ಅಪರಾಧವೇ ಎಂಬುದನ್ನು ಗೃಹ ಸಚಿವಾಲಯ ಸ್ಪಷ್ಟಪಡಿಸಬೇಕು ಹಾಗೂ ಯಾವ ಕಾನೂನಿನಡಿ ಎಂದು ತಿಳಿಸಬೇಕು.

2. ಅಲ್ಲವಾದರೆ, ಗೃಹ ಸಚಿವಾಲಯವು ಈ ಕೂಡಲೇ ಎಲ್ಲ ಪೊಲೀಸ್ ಪಡೆಗಳಿಗೆ ತುರ್ತು ಅಧಿಸೂಚನೆಯನ್ನು ಬಿಡುಗಡೆ ಮಾಡಿ, ಫೆಲೆಸ್ತೀನ್ ಧ್ವಜ ಬೀಸುವುದು ಅಥವಾ ಪ್ರದರ್ಶಿಸುವುದು ಅಪರಾಧವಲ್ಲ ಮತ್ತು ಅಂತಹ ಯಾವುದೇ ಬಂಧನಗಳು ಕಾನೂನುಬಾಹಿರ ಎಂದು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

ನಾವು ಭಾರತದ ವಿದೇಶಾಂಗ ನೀತಿಯನ್ನು ಒಂದು ಕಡೆ ಹಾಗೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪೊಲೀಸ್ ಪಡೆಗಳಿಗೆ ತಾಕೀತು ಮಾಡುವ ವಿಭಿನ್ನ ಸ್ವದೇಶಿ ನೀತಿಗಳನ್ನು ಮತ್ತೊಂದೆಡೆ ಹೊಂದಿರಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಪೊಲೀಸರ ಈ ಅನುಚಿತ ಅತಿರೇಕ ಹಾಗೂ ಬಿಜೆಪಿಯ ಹಿತಾಸಕ್ತಿಗನುಗುಣವಾಗಿ ಜನರನ್ನು ಗುರಿಯಾಗಿಸಿಕೊಳ್ಳುವ ಪ್ರವೃತ್ತಿಯನ್ನು ತುರ್ತಾಗಿ ಹತ್ತಿಕ್ಕಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News