ಉತ್ತರಾಖಂಡ: ಶಾಲಾ ಪಠ್ಯ ಕ್ರಮದಲ್ಲಿ ಭಗವದ್ಗೀತೆ, ರಾಮಾಯಣ; ಶಿಕ್ಷಕರಿಂದ ತೀವ್ರ ವಿರೋಧ
ಭಗವದ್ಗೀತೆ, ರಾಮಾಯಣ | PC : X
ಡೆಹ್ರಾಡೂನ್: ಉತ್ತರಾಖಂಡ ಸರಕಾರ ರಾಜ್ಯ ಪಠ್ಯ ಕ್ರಮದಲ್ಲಿ ಭಗವದ್ಗೀತೆ ಹಾಗೂ ರಾಮಾಯಣವನ್ನು ಪರಿಚಯಿಸಿದೆ. ಬುಧವಾರ ಜಾರಿಗೆ ಬಂದ ಈ ಪಠ್ಯಕ್ರಮಕ್ಕೆ ರಾಜ್ಯದ ಶಿಕ್ಷಕ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಇದು ಧಾರ್ಮಿಕ ಪಠ್ಯಗಳು. ಸಂವಿಧಾನದ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಕಲಿಸಲು ಸಾಧ್ಯವಿಲ್ಲ ಎಂದು ಶಿಕ್ಷಕರ ಸಂಘಟನೆ ಪ್ರತಿಪಾದಿಸಿದೆ.
‘‘ರಾಜ್ಯ ನಿಧಿಯಿಂದ ಸಂಪೂರ್ಣವಾಗಿ ನಿರ್ವಹಿಸಲ್ಪಡುವ ಅಥವಾ ರಾಜ್ಯ ನಿಧಿಯಿಂದ ನೆರವನ್ನು ಸ್ವೀಕರಿಸುತ್ತಿರುವ ಯಾವುದೇ ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಬೋಧನೆ ನೀಡಬಾರದು ಎಂದು ಭಾರತೀಯ ಸಂವಿಧಾನದ ವಿಧಿ 28 (1) ಸ್ಪಷ್ಟವಾಗಿ ಹೇಳುತ್ತದೆ. ಈ ವಿಧಿ ರಾಷ್ಟ್ರದ ಜಾತ್ಯಾತೀತ ಮೌಲ್ಯವನ್ನು ಎತ್ತಿ ಹಿಡಿಯಲು ಹಾಗೂ ಎಲ್ಲಾ ಧರ್ಮಗಳಿಗೆ ಸಮಾನ ಗೌರವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ’’ ಎಂದು ಶಿಕ್ಷಕರ ಸಂಘಟನೆಯ ಅಧ್ಯಕ್ಷ ಸಂಜಯ್ ಕುಮಾರ್ ಟಮ್ಟಾ ತಿಳಿಸಿದ್ದಾರೆ.
‘‘ಪ್ರಾರ್ಥನಾ ಸಭೆಗಳಲ್ಲಿ ಗೀತಾ ಶ್ಲೋಕಗಳನ್ನು ಸೇರಿಸುವ ನಿರ್ದೇಶನ ಸಂವಿಧಾನದ ಚೌಕಟ್ಟನ್ನು ಉಲ್ಲಂಘಿಸುತ್ತದೆ. ಆ ಮೂಲಕ ಸರಕಾರಿ ಶಾಲೆಗಳಲ್ಲಿ ಜಾತ್ಯತೀತ ಶಿಕ್ಷಣ ನೀಡುವ ತತ್ವವನ್ನು ದುರ್ಬಲಗೊಳಿತ್ತದೆ’’ ಎಂದು ಅವರು ಹೇಳಿದ್ದಾರೆ.