ಉತ್ತರಾಖಂಡ | ಬಿಜೆಪಿ ನಾಯಕನಿಂದ ವಂಚನೆ ಆರೋಪ; ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ | PC ; AI
ಡೆಹ್ರಾಡೂನ್, ಆ. 21: ಭೂಮಿ ಮಂಜೂರಾತಿ ನೆಪದಲ್ಲಿ ಬಿಜೆಪಿ ನಾಯಕರೊಬ್ಬರು ತನ್ನಿಂದ 35 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆದರೆ, ಭೂಮಿಯನ್ನೂ ಹಸ್ತಾಂತರಿಸಿಲ್ಲ. ಹಣವನ್ನೂ ಹಿಂದಿರುಗಿಸಿಲ್ಲ ಎಂದು ಆರೋಪಿಸಿ ವ್ಯಕ್ತಿಯೋರ್ವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಾಖಂಡದ ಪುರಿ ಜಿಲ್ಲೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡು ವ್ಯಕ್ತಿಯನ್ನು ಜಿತೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಡಿದ ವೀಡಿಯೊದಲ್ಲಿ ಜಿತೇಂದ್ರ ಸಿಂಗ್, ಬಿಜೆಪಿ ನಾಯಕ ಹಿಮಾಂಶು ಚಮೋಲಿ ನನ್ನ ಸಾವಿಗೆ ಕಾರಣ ಎಂದು ಹೇಳಿದ್ದಾರೆ. ಈ ವಂಚನೆಯ ಘಟನೆ ನನಗೆ ನಿರಂತರ ಮಾನಸಿಕ ಕಿರುಕುಳ ಉಂಟು ಮಾಡಿತು ಹಾಗೂ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು ಎಂದು ಅವರು ಹೇಳಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಎಂದು ಸುಳ್ಳು ಹೇಳಿಕೊಂಡು ಇತರರಿಂದಲೂ ಚಮೋಲಿ ಹಣ ಸಂಗ್ರಹಿಸಿದ್ದಾನೆ ಎಂದು ಕೂಡ ಜಿತೇಂದ್ರ ವೀಡಿಯೋದಲ್ಲಿ ಆರೋಪಿಸಿದ್ದಾರೆ.
‘‘ಹಿಮಾಂಶು ತಾನು ಭೂಮಿಗೆ ಅನುಮೋದನೆ ಪಡೆಯುತ್ತೇನೆ ಎಂದು ಹೇಳುತ್ತಿದ್ದ ಹಾಗೂ ಹಣ ತೆಗೆದುಕೊಳ್ಳುತ್ತಲೇ ಇದ್ದ’’ ಎಂದು ಅವರು ತಿಳಿಸಿದ್ದಾರೆ. ಕೊನೆಯ ವೀಡಿಯೊದಲ್ಲಿ ಜಿತೇಂದ್ರ, ಆತನೊಂದಿಗೆ ಒಪ್ಪಂದ ಮಾಡಿಕೊಂಡ ಇತರ ಇಬ್ಬರು ವ್ಯಕ್ತಿಗಳ ಹೆಸರನ್ನು ಕೂಡ ಹೇಳಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಹಾಗೂ ವಿಧಿ ವಿಜ್ಞಾನ ತಂಡ ಸ್ಥಳಕ್ಕೆ ತಲುಪಿ ಪುರಾವೆಗಳನ್ನು ಸಂಗ್ರಹಿಸಿದೆ. ಆರೋಪಿ ಹಿಮಾಂಶು ಚಮೋಲಿಯನ್ನು ಕಸ್ಟಡಿಗೆ ತೆಗೆದುಕೊಂಡಿದೆ.