×
Ad

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆಗಳ ನಡುವೆ ‘ನಕಲ್ ಜಿಹಾದ್’ ಆರೋಪಿಸಿದ ಉತ್ತರಾಖಂಡ ಸಿಎಂ!

Update: 2025-09-25 16:13 IST

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ (Photo: PTI)

ಡೆಹ್ರಾಡೂನ್: ಬುಧವಾರ ನಡೆದ ಪ್ರತಿಭಟನೆಗಳ ನಡುವೆಯೇ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿಯವರು ಇತ್ತೀಚಿನ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಯನ್ನು ‘ನಕಲ್ ಜಿಹಾದ್’ ಅಥವಾ ʼವಂಚನೆ ಜಿಹಾದ್ʼ ಎಂದು ಬಣ್ಣಿಸಿದ್ದಾರೆ.

ಉತ್ತರಾಖಂಡ ಅಧೀನ ಸೇವಾ ಆಯ್ಕೆ ಆಯೋಗದ ಪರೀಕ್ಷೆ ರವಿವಾರ ನಡೆದಿತ್ತು. ಪ್ರಶ್ನೆಪತ್ರಿಕೆಯ ಮೂರು ಪುಟಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿತ್ತು ಎಂಬ ವರದಿಯ ಬಳಿಕ ಸೋರಿಕೆ ಆರೋಪ ಕೇಳಿ ಬಂದಿದೆ.

ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ಆರೋಪಿಸಿ ಬುಧವಾರ ಸರಕಾರದ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪೋಲಿಸರು ಮಂಗಳವಾರ ಖಾಲಿದ್ ಮಲಿಕ್ ಮತ್ತು ಆತನ ಸೋದರಿ ಸಬಿಯಾರನ್ನು ಬಂಧಿಸಿದ್ದರು. ಹರಿದ್ವಾರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಮಲಿಕ್ ಪ್ರಶ್ನೆಪತ್ರಿಕೆಯ ಚಿತ್ರಗಳನ್ನು ಸಬಿಯಾ ಜೊತೆ ಹಂಚಿಕೊಂಡಿದ್ದು, ಆಕೆ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು ಅವುಗಳನ್ನು ಮಲಿಕ್‌ನ ಸ್ನೇಹಿತ ಸುಮನ್‌ಗೆ ಕಳುಹಿಸಿದ್ದಳು ಎಂದು ಪೋಲಿಸರು ಆರೋಪಿಸಿದ್ದಾರೆ.

ಪ್ರಾಧ್ಯಾಪಕರಾಗಿರುವ ಸುಮನ್ ಪ್ರಶ್ನೆಗಳನ್ನು ಬಿಡಿಸಿದ್ದರು, ಆದರೆ ಉತ್ತರಗಳನ್ನು ಕಳುಹಿಸಿರಲಿಲ್ಲ. ಬದಲಿಗೆ ಅವರು ಸ್ಥಳೀಯ ರಾಜಕಾರಣಿ ಬಾಬಿ ಪನ್ವರ್‌ಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ ಸಿಂಗ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಪನ್ವರ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಗೆ ಮಲಿಕ್ ಮತ್ತು ಸಬಿಯಾ ಮಾತ್ರ ಕಾರಣರಲ್ಲ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ನಡೆದ ಕಾಲೇಜಿನ ಪ್ರಾಂಶುಪಾಲ ಧರ್ಮೇಂದ್ರ ಚೌಹಾಣ್ ಅವರು ಆಡಳಿತಾರೂಢ ಬಿಜೆಪಿಯ ಹರಿದ್ವಾರ ಮಾಧ್ಯಮ ಕೋಶದ ಮುಖ್ಯಸ್ಥರಾಗಿದ್ದಾರೆ. ಪರೀಕ್ಷೆಯ ಸಂದರ್ಭದಲ್ಲಿ ಬಳಸಲಾಗಿದ್ದ 18 ತರಗತಿ ಕೋಣೆಗಳ ಪೈಕಿ 15ರಲ್ಲಿ ಮಾತ್ರಮೊಬೈಲ್ ಸಿಗ್ನಲ್‌ಗಳನ್ನು ಪ್ರತಿಬಂಧಿಸಲು ಜಾಮರ್‌ಗಳನ್ನು ಅಳವಡಿಸಲಾಗಿತ್ತು ಎಂದು ಅವರು ತಿಳಿಸಿದರು. ಜಾಮರ್ ಅಳವಡಿಸಿರದ ಕೋಣೆಯಲ್ಲಿ ಖಾಲಿದ್ ಪರೀಕ್ಷೆಗೆ ಹಾಜರಾಗಿದ್ದ ಎಂದರು.

ಈ ಸಲ ಆಯೋಗವು ತರಗತಿ ಕೋಣೆಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಸ್ವಿಚ್‌ಆಫ್ ಮಾಡಲು ಆದೇಶಿಸಿತ್ತು. ಮುಖ್ಯ ಪ್ರವೇಶ ದ್ವಾರ ಮತ್ತು ನಿಯಂತ್ರಣ ಕೊಠಡಿಯಲ್ಲಿ ಮಾತ್ರ ಕ್ಯಾಮೆರಾಗಳು ಇದ್ದವು ಎಂದು ಅವರು ತಿಳಿಸಿದರು.

ಬುಧವಾರ ಬಿಜೆಪಿಯ ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಧಾಮಿ,‌ ‘ರಾಜ್ಯದಲ್ಲಿ ʼನಕಲ್ ಜಿಹಾದ್ʼ ನಡೆಸಲು, ಪ್ರದೇಶದಲ್ಲಿ ಅರಾಜಕತೆ ಹರಡಲು ಕೋಚಿಂಗ್ ಮಾಫಿಯಾ ಮತ್ತು ಚೀಟಿಂಗ್ ಮಾಫಿಯಾ ಒಂದಾಗಿವೆ. ಈ ಮಾಫಿಯಾಗಳನ್ನು ನಾಶಗೊಳಿಸುವವರೆಗೂ ನಾವು ವಿಶ್ರಮಿಸುವುದಿಲ್ಲ’ ಎಂದರು.

ಬಿಜಪಿ ಸರಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೋಮುವಾದದ ಸುಲಭ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ಸೂರ್ಯಕಾಂತ ಧಸಮಾ ಅವರು, ಪರೀಕ್ಷೆಗೆ ಒಂದು ದಿನ ಮುನ್ನ ವಂಚಕ ಹಕಮ್ ಸಿಂಗ್‌ನನ್ನು ಪ್ರತ್ಯೇಕ ವಿಷಯದಲ್ಲಿ ಬಂಧಿಸಲಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಹಲವಾರು ಹೆಸರುಗಳು ಕೇಳಿ ಬಂದಿವೆ. ಆದರೆ ಮುಖ್ಯಮಂತ್ರಿಗಳ ಪಾಲಿಗೆ ಇದೂ ಒಂದು ಜಿಹಾದ್ ಆಗಿದೆ ಎಂದರು.

ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಗೊಳಿಸುವ ಭರವಸೆ ನೀಡಿ ಆರು ಅಭ್ಯರ್ಥಿಗಳಿಗೆ 12ರಿಂದ 15 ಲಕ್ಷ ರೂ.ಗಳನ್ನು ವಂಚಿಸಲು ಯತ್ನಿಸಿದ್ದ ಆರೋಪದಲ್ಲಿ ಪೋಲಿಸರು ಸಿಂಗ್ ಮತ್ತು ಆತನ ಸಹಚರ ಪಂಕಜ್ ಗೌರ್ ಅವರನ್ನು ಬಂಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News