×
Ad

ಬಿಜೆಪಿ ಮತಗಳಿಗಾಗಿ ಭಾರತೀಯ ಸೇನೆಯನ್ನು ಬಳಸುತ್ತಿದೆ: ಉತ್ತರಾಖಂಡ ಕಾಂಗ್ರೆಸ್ ಆರೋಪ

Update: 2025-05-14 21:32 IST

ಸಾಂದರ್ಭಿಕ ಚಿತ್ರ | PC : PTI

ಡೆಹ್ರಾಡೂನ್: ‘ಆಪರೇಷನ್ ಸಿಂಧೂರ’ದ ಕೇಂದ್ರದ ಮತ್ತು ಸೇನೆಯ ಕ್ರಮಗಳನ್ನು ಆರಂಭದಲ್ಲಿ ಬೆಂಬಲಿಸಿದ್ದ ಉತ್ತರಾಖಂಡ ಕಾಂಗ್ರೆಸ್ ಈಗ ರಾಜಕೀಯ ಲಾಭಕ್ಕಾಗಿ ಸೇನೆಯನ್ನು ಬಳಸಿಕೊಳ್ಳುತ್ತಿರುವುದಕ್ಕಾಗಿ ಬಿಜೆಪಿಯನ್ನು ಟೀಕಿಸಿದೆ.

ಈ ವಿಷಯದಲ್ಲಿ ಮೂರು ದಿನಗಳ ಮೌನದ ಬಳಿಕ ಪಕ್ಷದ ನಿಲುವಿನಲ್ಲಿ ಬದಲಾವಣೆಯಾಗಿದೆ.

‘ಆಪರೇಷನ್ ಸಿಂಧೂರ’ ಹೆಸರಿನಡಿ ‘ತಿರಂಗಾ ಯಾತ್ರೆ’ಯ ಬಿಜೆಪಿ ಪ್ರಕಟನೆಗೆ ಪ್ರತಿಕ್ರಿಯಿಸಿದ ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ ಧಸ್ಮಾನಾ ಅವರು, ಕಾಂಗ್ರೆಸ್ ಪಕ್ಷವು ಈ ಹಿಂದೆಯೇ ಸೇನೆಯು ಗಡಿಯಲ್ಲಿ ಮತ್ತು ಗಡಿಯಾಚೆ ಶತ್ರುಗಳೊಂದಿಗೆ ಹೋರಾಡುತ್ತಿದ್ದಾಗ ದೇಶಾದ್ಯಂತ ತಿರಂಗಾ ಯಾತ್ರೆಗಳನ್ನು ನಡೆಸಿತ್ತು ಎಂದು ಎತ್ತಿ ತೋರಿಸಿದರು.

ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದು ಮತ್ತು ಸಂಪೂರ್ಣ ರಾಷ್ಟ್ರೀಯ ಬೆಂಬಲವನ್ನು ಪ್ರದರ್ಶಿಸುವುದು ಇಂತಹ ಯಾತ್ರೆಗಳ ಏಕೈಕ ಉದ್ದೇಶವಾಗಿತ್ತು. ರಾಜ್ಯದ ರಾಜಧಾನಿ ಡೆಹ್ರಾಡೂನ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂತಹ ತಿರಂಗಾ ಯಾತ್ರೆಗಳನ್ನು ನಡೆಸುವ ಮೂಲಕ ಲಕ್ಷಾಂತರ ಕಾಂಗ್ರೆಸಿರು ಬಿಜೆಪಿಯ ಪ್ರಸ್ತುತ ಕ್ರಮಕ್ಕೆ ವ್ಯತಿರಿಕ್ತವಾಗಿ ತಮ್ಮ ರಾಷ್ಟ್ರೀಯ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿಯ ಯೋಜಿತ ಯಾತ್ರೆಗೆ ಕಾಂಗ್ರೆಸ್‌ನ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ ಧಸ್ಮಾನಾ, ಆದರೆ ಭಾರತದ ಭದ್ರತೆ,ಸ್ವರಕ್ಷಣೆ ಮತ್ತು ಸಾರ್ವಭೌಮತ್ವವನ್ನು ನಿರ್ಧರಿಸುವ ಹಕ್ಕನ್ನು ಅಮೆರಿಕಕ್ಕೆ ಕೊಟ್ಟವರು ಯಾರು ಎಂಬ ಜನತೆಯ ಮನಸ್ಸಿನಲ್ಲಿರುವ ಪ್ರಶ್ನೆಗೆ ಬಿಜೆಪಿ ಮತ್ತು ದೇಶದ ಪ್ರಧಾನಿ ಉತ್ತರಿಸಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News