ಆತ್ಮನಿರ್ಭರ, ಸಮೃದ್ಧ ಭಾರತ ನಿರ್ಮಾಣಕ್ಕೆ ‘ವಂದೇ ಮಾತರಂ’ ಸ್ಪೂರ್ತಿ: ಪ್ರಧಾನಿ
‘ವಂದೇ ಮಾತರಂ’ ನ 150ನೇ ವರ್ಷಾಚರಣೆ | ರಾಷ್ಟ್ರಗೀತೆ ಕುರಿತು ಚರ್ಚೆ
ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ, ಡಿ. 8: ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ನೀಡಿದ್ದ ವಂದೇ ಮಾತರಂ ಹಾಡಿನ ಸಾಲುಗಳನ್ನು ತೆಗೆದುಹಾಕುವ ಮೂಲಕ ಕಾಂಗ್ರೆಸ್ ಪಕ್ಷವು ಈ ರಾಷ್ಟ್ರೀಯ ಗೀತೆಗೆ ದ್ರೋಹವೆಸಗಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಸಂಸತ್ ನಲ್ಲಿ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ ಸೋಮವಾರ ‘ವಂದೇ ಮಾತರಂ’ನ 150ನೇ ವರ್ಷಾಚರಣೆಯ ಸಂದರ್ಭ ರಾಷ್ಟ್ರೀಯ ಗೀತೆ ಕುರಿತ ಚರ್ಚೆಯನ್ನು ಆರಂಭಿಸಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಅನ್ನು ಸಮಾಧಾನಪಡಿಸಲು ಜವಾಹರ್‌ಲಾಲ್ ನೆಹರೂ ಅವರು ‘ವಂದೇ ಮಾತರಂ’ನಿಂದ ಕೆಲವು ಸಾಲುಗಳನ್ನು ತೆಗೆದು ಹಾಕಿದ್ದಾರೆಂದು ಮೋದಿ ಟೀಕಿಸಿದರು. ಒತ್ತಡಕ್ಕೊಳಗಾದ ಕಾಂಗ್ರೆಸ್ ವಂದೇ ಮಾತರಂನ ಸಾಲುಗಳನ್ನು ತೆಗೆಯಿತು. ಅನಂತರ ಮತ್ತೆ ಒತ್ತಡಕ್ಕೊಳಗಾಗಿ ದೇಶವನ್ನು ವಿಭಜಿಸಲು ಒಪ್ಪಿಕೊಂಡಿತು ಎಂದು ಅವರು ಹೇಳಿದರು. ಕಳೆದ ಶತಮಾನದಲ್ಲಿ ಕೆಲವು ಶಕ್ತಿಗಳು ರಾಷ್ಟ್ರೀಯ ಗೀತೆಯಾದ ವಂದೇಮಾತರಂಗೆ ದ್ರೋಹವೆಸಗಿದೆ ಎಂದು ಪ್ರಧಾನಿ ಮೋದಿ ಹೇಳಿದಾಗ, ಆಳುವ ಪಕ್ಷದ ಸದಸ್ಯರು ಶೇಮ್, ಶೇಮ್ ಎಂದು ಧ್ವನಿಗೂಡಿಸಿದರು.
ಕಾಂಗ್ರೆಸನ್ನು ತರಾಟೆಗೆ ತೆಗೆದುಕೊಂಡು ಪ್ರಧಾನಿ ಅವರು, ‘ವಂದೇ ಮಾತರಂ’ಗೆ 100 ವರ್ಷಗಳು ಪೂರ್ಣಗೊಂಡಾಗ, ದೇಶ ತುರ್ತು ಪರಿಸ್ಥಿತಿಯಿಂದ ಬಂದಿಸಲ್ಪಟ್ಟಿತ್ತು. ಈ ಸಂದರ್ಭ ಸಂವಿಧಾನವನ್ನು ಹತ್ತಿಕ್ಕಲಾಯಿತು. ದೇಶಕ್ಕಾಗಿ ಹೋರಾಡಿದವರನ್ನು ಜೈಲುಕಂಬಿಯ ಹಿಂದೆ ತಳ್ಳಲಾಯಿತು. ತುರ್ತು ಪರಿಸ್ಥಿತಿ ನಮ್ಮ ಚರಿತ್ರೆಯ ಕರಾಳ ಅಧ್ಯಾಯ. ಈಗ ವಂದೇ ‘ವಂದೇ ಮಾತರಂ’ನ ಶ್ರೇಷ್ಟತೆಯನ್ನು ಮರು ಸ್ಥಾಪಿಸುವ ಅವಕಾಶ ನಮಗಿದೆ ಎಂದು ಅವರು ಹೇಳಿದರು.
ಆತ್ಮ ನಿರ್ಭರ ಭಾರತ ಹಾಗೂ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಲು ‘ವಂದೇ ಮಾತರಂ’ ಸ್ಫೂರ್ತಿಯಾಗಿದೆ .‘‘ನಮ್ಮ ಪೂರ್ವಜರು ಸ್ವತಂತ್ರ್ಯ ಭಾರತದ ಕನಸು ಕಂಡಿದ್ದರು. ಇಂದಿನ ತಲೆಮಾರು ಸಮೃದ್ಧ ಭಾರತವನ್ನು ಬಯಸುತ್ತಿದೆ. ವಂದೇ ಮಾತರಂನ ಸ್ಫೂರ್ತಿ ಸ್ವಾತಂತ್ರ್ಯ ಭಾರತದ ಆಶಯವನ್ನು ಪ್ರೇರೇಪಿಸಿತು. ಈಗ ಅದು ಸಮೃದ್ಧ ಭಾರತದ ನಿರ್ಮಾಣಕ್ಕೆ ಬೆಂಬಲಿಸುತ್ತಿದೆ’’ ಎಂದು ಅವರು ಹೇಳಿದರು.
‘‘ಈಗ ಹಿಂದೆ ಏನಾಯಿತು ಎಂಬುದನ್ನು ಮರೆತು ಬಿಡಿ. ನಾವು ಸ್ವಾತಂತ್ರ್ಯ ದಿನಾಚರಣೆಯನ್ನು, ಪ್ರಜಾಪ್ರಭುತ್ವ ದಿನವನ್ನು ಆಚರಿಸುವಾಗ ಅಥವಾ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮದಲ್ಲಿ ವಂದೇ ಮಾತರಂ ಸ್ಫೂರ್ತಿಯನ್ನು ಕಾಣಬಹುದು’’ ಎಂದು ಅವರು ಹೇಳಿದರು.
‘‘ದೇಶದ ಸ್ವಾತಂತ್ರ್ಯಕ್ಕೆ ಬೆದರಿಕೆ ಬಂದಾಗ, ಸಂವಿಧಾನವನ್ನು ನಿರ್ಲಕ್ಷಿಸಿದಾಗ ಹಾಗೂ ತುರ್ತು ಪರಿಸ್ಥಿತಿ ಹೇರಿದಾಗ ‘ವಂದೇ ಮಾತರಂ’ದೇಶ ಮತ್ತೆ ಮೇಲೇಳಲು ನೆರವು ನೀಡಿತು. ದೇಶ ಯುದ್ಧಗಳನ್ನು ಅಥವಾ ಬಾಹ್ಯಾ ಸವಾಲುಗಳನ್ನು ಎದುರಿಸಿದಾಗಲೆಲ್ಲ ನಮ್ಮ ಯೋಧರು ‘ವಂದೇ ಮಾತರಂ’ನ ಶಕ್ತಿಯೊಂದಿಗೆ ಗಡಿಗಳಲ್ಲಿ ದೃಢವಾಗಿ ನಿಂತು ರಾಷ್ಟ್ರಧ್ವಜವನ್ನು ಹಾರಿಸಿದರು. ನಾವು ಜಾಗತಿಕ ಬಿಕ್ಕಟ್ಟು ಎದುರಿಸಿದಾಗಲೆಲ್ಲಾ ದೇಶವು ‘ವಂದೇ ಮಾತರಂ’ ಸ್ಫೂರ್ತಿಯಿಂದ ಎದ್ದು ನಿಂತು ಮುಂದೆ ಸಾಗಿದೆ’’ ಎಂದು ಅವರು ಹೇಳಿದ್ದಾರೆ.
ವಂದೇ ಮಾತರಂ ಭಾರತದ ಶಕ್ತಿ ಹಾಗೂ ಶ್ರೇಷ್ಟತೆಯನ್ನು ತೋರಿಸುತ್ತದೆ. ಇದು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಅಭಿವೃದ್ಧಿ ಹಾಗೂ ಸಮೃದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಂದೇ ಮಾತರಂ ಹಿಂದಿನದನ್ನು ನೆನಪಿಸಿಕೊಳ್ಳುವ ಕ್ಷಣವಲ್ಲ. ಅದು ಶಕ್ತಿ ಹಾಗೂ ಸ್ಫೂರ್ತಿಯ ಮೂಲವಾಗಿ ಉಳಿದುಕೊಂಡಿದೆ. ನಾವು ಅದಕ್ಕಾಗಿ ಕೃತಜ್ಞರಾಗಿರಬೇಕು ಎಂದು ನರೇಂದ್ರ ಮೋದಿ ಹೇಳಿದರು.
►ನಾಲ್ಕೆ ಪದಗಳಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ
ಹೊಸದಿಲ್ಲಿ: ರಾಷ್ಟ್ರ ಗೀತೆ ‘ವಂದೇ ಮಾತರಂ’ ಚರ್ಚೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾಲ್ಕು ಪದಗಳ ಪ್ರತಿಕ್ರಿಯೆ ನೀಡಿದ್ದಾರೆ. ‘‘ಪ್ರಿಯಾಂಕಾ ಗಾಂಧಿ ಭಾಷಣ ಕೇಳಿ’’ ಎಂದು ಅವರು ಹೇಳಿದ್ದಾರೆ.
►ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದವರು ‘ವಂದೇ ಮಾತರಂ’ ಬಗ್ಗೆ ಮಾತನಾಡುತ್ತಾರೆ: ಅಖಿಲೇಶ್ ಯಾದವ್
ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಈಗ ‘ವಂದೇ ಮಾತರಂ’ನ ಮೌಲ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ಒಬ್ಬರ ನಂಬಿಕೆಯನ್ನು ಇತರರ ಮೇಲೆ ಹೇರುವ ಸಾಧನವಾಗಿ ರಾಷ್ಟ್ರ ಗೀತೆಯನ್ನು ಬಳಸಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.
►ಪ್ರಧಾನಿ ಚರಿತ್ರೆಯನ್ನು ಮರು ರಚಿಸಲು ಪ್ರಯತ್ನಿಸುತ್ತಿದ್ದಾರೆ : ಗೌರವ್ ಗೊಗೋಯ್
‘ವಂದೇ ಮಾತರಂ’ ಕುರಿತ ಚರ್ಚೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಚರಿತ್ರೆಯನ್ನು ಮರು ಬರೆಯುವ ಉದ್ದೇಶವನ್ನು ಹಾಗೂ ಅದಕ್ಕೆ ರಾಜಕೀಯ ಬಣ್ಣವನ್ನು ನೀಡುವ ಉದ್ದೇಶವನ್ನು ಹೊಂದಿದೆ ಎಂದು ಕಾಂಗ್ರೆಸ್ ನಾಯಕ ಗೌರವ ಗೊಗೋಯ್ ಹೇಳಿದ್ದಾರೆ. ಬಿಜೆಪಿ ಏನೇ ಮಾಡಿದರೂ ಜವಾಹರ್‌ಲಾಲ್ ನೆಹರೂ ಅವರು ನೀಡಿದ ಕೊಡುಗೆಗೆ ಒಂದು ಕಪ್ಪು ಚುಕ್ಕೆಯನ್ನು ಹಾಕಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.