ನಾಳೆ ಉಪ ರಾಷ್ಟ್ರಪತಿ ಚುನಾವಣೆ: NDA-ಇಂಡಿಯಾ ಮೈತ್ರಿಕೂಟಗಳ ನಡುವೆ ತೀವ್ರ ಹಣಾಹಣಿ
ಸಿ.ಪಿ.ರಾಧಾಕೃಷ್ಣನ್, ಬಿ.ಸುದರ್ಶನ್ ರೆಡ್ಡಿ (Photo: PTI)
ಹೊಸದಿಲ್ಲಿ: ನಾಳೆ (ಸೆಪ್ಟೆಂಬರ್ 9) ಉಪ ರಾಷ್ಟ್ರಪತಿ ಚುನಾವಣಾ ನಡೆಯಲಿದ್ದು, ಆಡಳಿತಾರೂಢ NDA ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.
ವಿಪಕ್ಷಗಳ ಪೈಕಿ ಬಿಜೆಪಿ, ಬಿಆರ್‌ಎಸ್ ಸೇರಿದಂತೆ 17 ಸಂಸದರು ಯಾವ ಅಭ್ಯರ್ಥಿಗೆ ಮತ ಚಲಾಯಿಸಲಿದ್ದೇವೆ ಎಂಬ ನಿರ್ಧಾರ ಪ್ರಕಟಿಸದ ಹಿನ್ನೆಲೆಯಲ್ಲಿ ಕುತೂಹಲ ಮನೆ ಮಾಡಿದೆ.
ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ, ತಮಿಳುನಾಡು ಮೂಲದ ಸಿ.ಪಿ.ರಾಧಾಕೃಷ್ಣನ್ ಹಾಗೂ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ, ತೆಲಂಗಾಣ ಮೂಲದ ಬಿ.ಸುದರ್ಶನ್ ರೆಡ್ಡಿ ಕಣದಲ್ಲಿದ್ದಾರೆ. ಯಾರಿಗೆ ಮತ ಚಲಾಯಿಸಬೇಕು ಎಂದು ಇನ್ನೂ ನಿರ್ಧರಿಸದ 17 ಸಂಸದರನ್ನು ಹೊರತುಪಡಿಸಿ, ಉಳಿದ ಎಲ್ಲ ಸಂಸದರೂ ತಮ್ಮ ತಮ್ಮ ಪಕ್ಷಗಳ ಆಧಾರದಲ್ಲಿ ಮತ ಚಲಾಯಿಸಿದರೆ, ರಾಧಾಕೃಷ್ಣನ್ ಅವರು ಸುದರ್ಶನ್ ರೆಡ್ಡಿ ಅವರ ವಿರುದ್ಧ 439-324 ಮತಗಳ ಮುನ್ನಡೆ ಪಡೆಯಲಿದ್ದಾರೆ.
ಪ್ರಸ್ತುತ ಮತದಾರರ ಸಂಖ್ಯೆ 781 (ರಾಜ್ಯಸಭೆ, ಲೋಕಸಭೆ ಸದಸ್ಯರು) ಆಗಿದೆ. ಮತದಾರರ ಪಟ್ಟಿ ಸಿದ್ಧವಾದ ನಂತರ, ಶಿಬು ಸೊರೇನ್ ನಿಧನರಾಗಿದ್ದಾರೆ. ಅವರ ಸ್ಥಾನವೂ ಸೇರಿದಂತೆ ಒಟ್ಟು ಏಳು ಸ್ಥಾನ ಖಾಲಿ ಇವೆ. ಬಿಜೆಡಿಯ ಏಳು, ಬಿಆರ್‌ಎಸ್ ನ ನಾಲ್ವರು, ಅಕಾಲಿದಳ, ಝೆಡ್ ಪಿಎಂ ಮತ್ತು ವಿಒಟಿಟಿಪಿಯ ತಲಾ ಒಬ್ಬರು ಹಾಗೂ ಮೂವರು ಸ್ವತಂತ್ರರು ತಮ್ಮ ಆದ್ಯತೆ ಯಾರು ಎಂಬುದನ್ನು ಇಲ್ಲಿಯವರೆಗೆ ಸ್ಪಷ್ಟವಾಗಿ ಸೂಚನೆ ನೀಡಿಲ್ಲ.
ಸದ್ಯ ‘ಇಂಡಿಯಾ’ ಮೈತ್ರಿಕೂಟ ತೊರೆದಿರುವ ಆಪ್, ತನ್ನ 10 ಸಂಸದರ ಬೆಂಬಲವನ್ನು ಸುದರ್ಶನ್ ರೆಡ್ಡಿ ಅವರಿಗೆ ಸೂಚಿಸಿದ್ದರೆ, ಯಾವುದೇ ಬಣದ ಜೊತೆಗೆ ಗುರುತಿಸಿಕೊಳ್ಳನದ ವೈಎಸ್ಆರ್ ಕಾಂಗ್ರೆಸ್, ತನ್ನ 11 ಸದಸ್ಯರ ಬೆಂಬಲವನ್ನು ರಾಧಾಕೃಷ್ಣನ್ ಅವರಿಗೆ ನೀಡುವುದಾಗಿ ಘೋಷಿಸಿದೆ.
ಈ ಚುನಾವಣೆಗೆ ಗೋಪ್ಯ ಮತದಾನ ನಡೆಯುವುದರಿಂದ, ಅಡ್ಡ ಮತದಾನದ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
ನಾಳೆ (ಸೆಪ್ಟೆಂಬರ್ 9) ಬೆಳಗ್ಗೆ 10ರಿಂದ ಸಂಜೆ 5ರವರೆಗೂ ಮತದಾನ ನಡೆಯಲಿದ್ದು, ಸಂಜೆ 6 ಗಂಟೆಗೆ ಮತ ಎಣಿಕೆ ನಡೆಯಲಿದೆ. ಬಳಿಕ ಫಲಿತಾಂಶ ಪ್ರಕಟವಾಗಲಿದೆ.