×
Ad

ಉಪರಾಷ್ಟ್ರಪತಿ ಚುನಾವಣೆ | ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೆಹ್ಲೋಟ್, ಸಕ್ಸೇನಾ, ಆರೀಫ್

Update: 2025-08-16 20:23 IST

ಕರ್ನಾಟಕ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಹಾಗೂ ಬಿಹಾರ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ | PTI  

ಹೊಸದಿಲ್ಲಿ,ಆ.16: ಉಪರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿರುವಂತೆಯೇ, ತನ್ನ ಅಭ್ಯರ್ಥಿಯನ್ನು ಆಯ್ಕೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಬಿಜೆಪಿ ಚುರುಕುಗೊಳಿಸಿದ್ದು, ಕರ್ನಾಟಕ ರಾಜ್ಯಪಾಲ ತಾವರ್‌ ಚಂದ್ ಗೆಹ್ಲೋಟ್, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಹಾಗೂ ಬಿಹಾರ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಸಂಭಾವ್ಯರ ಪಟ್ಟಿಯಲ್ಲಿದ್ದಾರೆ.

ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ, ಸಿಕ್ಕಿಂ ರಾಜ್ಯಪಾಲ ಓಂ ಮಾಥುರ್ ಹಾಗೂ ಜಮ್ಮುಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೂಡಾ ರೇಸ್‌ ನಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.

ಉಪರಾಷ್ಟ್ರಪತಿ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಯಾಗಿ ಆರೆಸ್ಸೆಸ್ ನ ಶೇಷಾದ್ರಿ ಚಾರಿ ಅವರ ಹೆಸರು ಕೂಡಾ ಚರ್ಚೆಯಲ್ಲಿದೆ. ಇದರ ಜೊತೆಗೆ ಬಿಹಾರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಚುಕೊಂಡು, ಜೆಡಿಯು ನಾಯಕ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಬಿಜೆಪಿ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಆದರೆ ಮುಂದಿನ ಉಪರಾಷ್ಟ್ರಪತಿ ತಮ್ಮ ಪಕ್ಷದವರೇ ಆಗಲಿದ್ದು, ಅದರಲ್ಲೂ ಪಕ್ಷ ಹಾಗೂ ಆರೆಸ್ಸೆಸ್‌ ನ ಸಿದ್ದಾಂತದ ಬಲವಾದ ನಂಟು ಹೊಂದಿರುವವರನ್ನೇ ಆಯ್ಕೆ ಮಾಡಲಾಗುವುದು ಎಂದು ಬಿಜೆಪಿ ನಾಯಕರು ಈ ಹಿಂದೆ ಸ್ಪಷ್ಟಪಡಿಸಿದ್ದು, ಉಪರಾಷ್ಟ್ರಪತಿ ಅಭ್ಯರ್ಥಿಯಾಗುವ ಹಂಬಲ ವ್ಯಕ್ತಪಡಿಸಿ ಕಳೆದ ಒಂದು ತಿಂಗಳಲ್ಲಿ ಹಲವಾರು ರಾಜ್ಯಪಾಲರು ಹಾಗೂ ಉಪರಾಜ್ಯಪಾಲರುಗಳು ತಮ್ಮನ್ನು ಭೇಟಿ ಮಾಡಿದ್ದರೆಂದು ಮೂಲಗಳು ತಿಳಿಸಿವೆ.

ಉಪರಾಷ್ಟ್ರಪತಿ ಸ್ಥಾನಕ್ಕೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಯಲಿದೆ.

ಜಗದೀಪ್ ಧನ್ಕರ್ ಅವರು ಜುಲೈ 21ರಂದು ಅನಾರೋಗ್ಯದ ಕಾರಣಗಳನ್ನು ನೀಡಿ, ಹಠಾತ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ಕೇಂದ್ರ ಸರಕಾರದೊಂದಿಗೆ ಭಿನ್ನಮತ ಹಾಗೂ ಅಸಮಾಧಾನ ಮತ್ತು ವಿಶ್ವಾಸದ ಕೊರತೆ, ಧನ್ಕರ್ ಅವರ ಹಠಾತ್ ರಾಜೀನಾಮೆಗೆ ಕಾರಣವೆಂದು ಕೆಲವು ಮೂಲಗಳು ತಿಳಿಸಿವೆ. ಧನ್ಕರ್ ಅವರ ಅಧಿಕಾರಾವಧಿಯು 2027ರ ಆಗಸ್ಟ್‌ ನಲ್ಲಿ ಕೊನೆಗೊಳ್ಳಲಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News