ವೀಡಿಯೊಕಾನ್ ಲಂಚ ಪ್ರಕರಣ | ಚಂದಾ ಕೊಚ್ಚಾರ್ ದೋಷಿ: ಮೇಲ್ಮನವಿ ಟ್ರಿಬ್ಯೂನಲ್ ತೀರ್ಪು
ಚಂದಾ ಕೊಚಾರ್ ದೋಷಿ | PC : NDTV
ಹೊಸದಿಲ್ಲಿ: ವಿಡಿಯೋಕಾನ್ ಸಮೂಹದಿಂದ 64 ಕೋಟಿ ರೂ. ಲಂಚವನ್ನು ಸ್ವೀಕರಿಸಿದ ಆರೋಪದಲ್ಲಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ನಿರ್ದೇಶಕಿ ಚಂದಾ ಕೊಚ್ಚಾರ್ ದೋಷಿಯೆಂದು ಮೇಲ್ಮನವಿ ನ್ಯಾಯಾಧೀಕರಣವು ಮಂಗಳವಾರ ಘೋಷಿಸಿದೆ.
ಚಂದಾ ಕೊಚ್ಚಾರ್ ಅವರು ತನ್ನ ಅಧಿಕಾರಾವಧಿಯಲ್ಲಿ ವಿಡಿಯೋಕಾನ್ ಸಮೂಹಕ್ಕೆ 300 ಕೋಟಿ ರೂ. ಸಾಲವನ್ನು ಮಂಜೂರು ಮಾಡಿದ್ದಕ್ಕೆ ಪ್ರತಿಫಲವಾಗಿ, ಮೊದಲೇ ಗೊತ್ತುಪಡಿಸಿದಂತೆ 64 ಕೋಟಿ ರೂ. ಲಂಚವನ್ನು ಪಡೆದಿದ್ದಾರೆಂದು ನ್ಯಾಯಾಧೀಕರಣ ತಿಳಿಸಿತ್ತು.
ಚಂದಾ ಕೊಚ್ಚಾರ್ ಅವರ ಪತಿ ನಿರ್ವಹಣೆ ಹಾಗೂ ನಿಯಂತ್ರಣದ ನುಪವರ್ ರಿನ್ಯೂವೇಬಲ್ಸ್ ಪ್ರೈ. ಲಿಮಿಟೆಡ್ (ಎನ್‌ಆರ್‌ಪಿಎಲ್)ಗೆ ವಿಡಿಯೋಕಾನ್‌ನಿಂದ 64 ಕೋಟಿ ರೂ. ಹಣವನ್ನು ತಕ್ಷಣವೇ ಹಣ ವರ್ಗಾವಣೆ ಮಾಡಿರುವುದನ್ನು ಗಮನಿಸಿರುವುದಾಗಿ ನ್ಯಾಯಾಧೀಕರಣವು ಜುಲೈ 3ರ ಆದೇಶದಲ್ಲಿ ತಿಳಿಸಿತ್ತು.
‘‘ಎನ್‌ಆರ್‌ಪಿಎಲ್ ಸಂಸ್ಥೆಯ ಮಾಲಕತ್ವವನ್ನು ವಿ.ಎನ್.ಧೂತ್ (ವೀಡಿಯೊಕಾನ್ ಸಮೂಹದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ) ಹೊಂದಿದ್ದಾರೆಂದು ದಾಖಲೆಪತ್ರಗಳಲ್ಲಿ ತೋರಿಸಲಾಗಿದೆ. ಆದರೆ ಅದರ ನೈಜ ನಿಯಂತ್ರಣವು ಚಂದಾ ಕೊಚ್ಚಾರ್ ಬಳಿ ಇತ್ತೆಂದು ಸ್ವತಃ ವಿ.ಎನ್.ಧೂತ್ ಅವರೇ ಒಪಿಕೊಂಡಿದ್ದಾರೆ’’ ಎಂದು ನ್ಯಾಯಾಧೀಕರಣ ಗಮನಸೆಳೆದಿದೆ.
ಇದೊಂದು ಕೊಡುಕೊಳ್ಳುವಿಕೆಯ ವ್ಯವಸ್ಥೆಯಾಗಿತ್ತೆಂಬ ಜಾರಿ ನಿರ್ದೇಶನಾಲಯ (ಈಡಿ)ದ ಹೇಳಿಕೆಯನ್ನು ಕಪ್ಪುಹಣ ಬಿಳುಪು ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 50ರ ಅಡಿ ದಾಖಲಾದ ಹೇಳಿಕೆಗಳು ಸೇರಿದಂತೆ ದೃಢಪಡಿಸಿವೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಕೊಚ್ಚಾರ್ ದಂಪತಿಗಳದ್ದು ಸೇರಿದಂತೆ 78 ಕೋಟಿ ರೂ.ಮೌಲ್ಯದ ಮುಟ್ಟುಗೋಲು ಹಾಕಲಾದ ಆಸ್ತಿಗಳನ್ನು ಬಿಡುಗಡೆಗೊಳಿಸಿ ಮೇಲ್ಮನವಿ ಪ್ರಾಧಿಕಾರದ ಈ ಮೊದಲಿನ ನಿರ್ಧಾರಕ್ಕೆ ಪ್ರಾಧಿಕಾರವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಾಧಿಕಾರವು ವಾಸ್ತವಿಕ ಅಂಶಗಳನ್ನು ಕಡೆಗಣಿಸಿತ್ತು ಆಹಗೂ ದಾಖಲೆಗಳಿಲ್ಲಿರುವುದಕ್ಕಿಂತ ವ್ಯತಿರಿಕ್ತವಾಗಿ ನಿರ್ಣಯಗಳನ್ನು ಕೈಗೊಂಡಿತ್ತೆಂದು ವರದಿ ಹೇಳಿದೆ.