ಉತ್ತರ ಪ್ರದೇಶ | ಉಪಚುನಾವಣೆಯಲ್ಲಿ ವಂಚನೆ ಆರೋಪಗಳಿಗೆ ಪುಷ್ಟಿ ನೀಡಿದ ದತ್ತಾಂಶ!
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಮುಹಮ್ಮದ್ ರಿಝ್ವಾನ್ ಅವರು 2012ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಕುಂದರ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮವೀರ್ ಸಿಂಗ್ ವಿರುದ್ಧ 17,000ಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. 2017ರ ಚುನಾವಣೆಯಲ್ಲಿ ಇಬ್ಬರೂ ಮತ್ತೆ ಕಣಕ್ಕಿಳಿದಿದ್ದರು. ತ್ರಿಕೋನ ಸ್ಪರ್ಧೆ ಮತ್ತು ಬಿಜೆಪಿ ಪರ ಅಲೆಯಿದ್ದರೂ ರಿಝ್ವಾನ್ 10,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ 2022ರ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿ ಝಿಯಾವುರ್ ರೆಹಮಾನ್ ಬರ್ಕ್ ಅವರು ಬಿಜೆಪಿ ವಿರುದ್ಧ 43,162 ಅಂತಗಳ ಭಾರೀ ಅಂತರದಿಂದ ಗೆದ್ದಿದ್ದರು.
ಕುಂದರ್ಕಿ ವಿಧಾನಸಭಾ ಕ್ಷೇತ್ರವು ಬಿಜೆಪಿಗೆ ಭೇದಿಸಲು ಸಾಧ್ಯವಾಗದ ಭದ್ರಕೋಟೆಯಾಗಿತ್ತು. 2024ರವರೆಗೂ ಬಿಜೆಪಿ ಈ ಮುಸ್ಲಿಮ್ ಬಹುಸಂಖ್ಯಾತ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ.
2024ರ ಪೂರ್ವಾರ್ಧದಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಬರ್ಕ್ ಅವರು ಸಂಸದರಾಗಿ ಆಯ್ಕೆಯಾಗಿದ್ದರಿಂದ ಕುಂದರ್ಕಿ ವಿಧಾನಸಭಾ ಕ್ಷೇತ್ರವು ತೆರವುಗೊಂಡಿತ್ತು. ಆ ವರ್ಷದ ನವೆಂಬರ್ ನಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಎಸ್‌ಪಿಯ ರಿಝ್ವಾನ್ ಮತ್ತು ಬಿಜೆಪಿಯ ಸಿಂಗ್ ಕಣಕ್ಕಿಳಿದಿದ್ದರು.
ಆಘಾತಕಾರಿ ಫಲಿತಾಂಶದಲ್ಲಿ ಸಿಂಗ್ ಅಭೂತಪೂರ್ವ 1.4 ಲಕ್ಷ ಮತಗಳ ಅಂತರದಿಂದ ರಿಝ್ವಾನ್ ರನ್ನು ಪರಾಭವಗೊಳಿಸಿದ್ದರು. ಬಿಜೆಪಿಯ ಮತಗಳಿಕೆ ಪ್ರಮಾಣ 2022ರ ಶೇ.30.4ರಿಂದ ಶೇ.77ಕ್ಕೆ ಏರಿಕೆಯಾಗಿದ್ದರೆ ಎಸ್‌ಪಿಯ ಮತಗಳಿಕೆ ಪ್ರಮಾಣ ಶೇ.46.3ರಿಂದ ಕೇವಲ ಶೇ.11.5ಕ್ಕೆ ಕುಸಿದಿತ್ತು.
ಈ ಗಮನಾರ್ಹ ಬದಲಾವಣೆಗೆ ಕಾರಣವೇನಾಗಿತ್ತು? ಉಪಚುನಾವಣೆ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಸುದ್ದಿ ಜಾಲತಾಣ scroll.in ನ ವರದಿಗಾರರ ತಂಡದೊಂದಿಗೆ ಮಾತನಾಡಿದ್ದ ಮುಸ್ಲಿಮ್ ಮತದಾರರು ಅಧಿಕಾರಿಗಳು ಭಾರೀ ಪ್ರಮಾಣದಲ್ಲಿ ಮತದಾರರ ಹಕ್ಕುಗಳನ್ನು ಕಿತ್ತುಕೊಂಡಿದ್ದರು ಎಂದು ಆರೋಪಿಸಿದ್ದರು. ಮತಗಟ್ಟೆಯಲ್ಲಿ ತಮ್ಮ ಗುರುತನ್ನು ಸಾಬೀತುಗೊಳಿಸಲು ಸಾಧ್ಯವಾಗದಂತೆ ಮಾಡಲು ಚುನಾವಣೆಗೆ ಮುನ್ನ ತಮ್ಮ ಆಧಾರ್ ಕಾರ್ಡ್‌ಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ಕೆಲವರು ಹೇಳಿದ್ದರೆ, ಕೆಲವರಿಗೆ ಮತದಾರರ ಚೀಟಿಗಳೇ ದೊರಕಿರಲಿಲ್ಲ. ಚೀಟಿ ಸಿಕ್ಕಿದ್ದ ಕೆಲವರು ಪೋಲಿಸ್ ಅಧಿಕಾರಿಗಳು ತಮ್ಮನ್ನು ಮತಗಟ್ಟೆಯಿಂದ ದೂರವಿರಿಸಿದ್ದರು ಎಂದು ಆರೋಪಿಸಿದ್ದರು.
ಬಿಜೆಪಿಗೆ ಮತ ಚಲಾಯಿಸುವ ಸಾಧ್ಯತೆಯಿದ್ದ ಮತದಾರರು ಪಕ್ಷದ ಕಾರ್ಯಕರ್ತರು ವಿತರಿಸಿದ್ದ ವಿಶೇಷ ಮತದಾರರ ಚೀಟಿಗಳನ್ನು ಹೊಂದಿದ್ದರಿಂದ ಅವರಿಗೆ ಮತಗಟ್ಟೆಗಳಲ್ಲಿ ಅವಕಾಶ ನೀಡಲಾಗಿತ್ತು ಎಂದೂ ಮುಸ್ಲಿಮರು ಆರೋಪಿಸಿದ್ದರು.
ಕುಂದರ್ಕಿ ಕ್ಷೇತ್ರದಲ್ಲಿ ತಮ್ಮನ್ನು ಮತದಾನದ ಹಕ್ಕಿನಿಂದ ವಂಚಿಸಲಾಗಿತ್ತು ಎಂಬ ಮುಸ್ಲಿಮರ ಆರೋಪಗಳನ್ನು ಈಗ ದತ್ತಾಂಶಗಳು ಪ್ರತಿಬಿಂಬಿಸಿವೆ ಎಂದು scroll.in ವರದಿ ಮಾಡಿದೆ.
ಚುನಾವಣಾ ಆಯೋಗವು ಬಿಡುಗಡೆಗೊಳಿಸಿದ ಕುಂದರ್ಕಿಯ ಬೂತ್ ಮಟ್ಟದ ಅಂಕಿಅಂಶಗಳು ಈಗ ಸಾರ್ವಜನಿಕವಾಗಿ ಲಭ್ಯವಿದ್ದು, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದ ಬೂತ್ ಗಳಲ್ಲಿಯೂ ಬಿಜೆಪಿಯ ಮತಗಳ ಪಾಲು ಹೆಚ್ಚಾಗಿದ್ದನ್ನು ತೋರಿಸಿವೆ. ಇದು ಅಸಂಗತವಾಗಿದೆ, ಏಕೆಂದರೆ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕೆಲವೇ ಮುಸ್ಲಿಮರು ಮತ ನೀಡುತ್ತಾರೆ ಎನ್ನುವುದನ್ನು ಇತರ ಎಲ್ಲ ದತ್ತಾಂಶಗಳು ಸೂಚಿಸಿವೆ.
ಸಮುದಾಯದ ಸದಸ್ಯರು ಆರೋಪಿಸಿದ್ದಂತೆ ಮತದಾನದ ದಿನದಂದು ಮುಸ್ಲಿಮರಿಗೆ ಮತಗಟ್ಟೆಗಳನ್ನು ಪ್ರವೇಶಿಸಲು ಅವಕಾಶ ನೀಡದಿದ್ದದ್ದು ಇದಕ್ಕೆ ಕಾರಣವಾಗಿರಬಹುದು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಮತದಾರರ ಪಟ್ಟಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮೇತರ ಮತದಾರರನ್ನು ಸೇರಿಸಲಾಗಿತ್ತು ಮತ್ತು ಮುಸ್ಲಿಮರ ಹೆಸರುಗಳನ್ನು ಅಳಿಸಲಾಗಿತ್ತು ಎನ್ನುವುದನ್ನು Scroll.in ನ ವಿಶ್ಲೇಷಣೆಯು ತೋರಿಸಿದೆ.