×
Ad

ಮಸೀದಿಗಳು, ಈದ್ಗಾಗಳನ್ನು ಕಿತ್ತುಕೊಳ್ಳಲು ವಕ್ಫ್ ಕಾಯ್ದೆಯನ್ನು ತರಲಾಗಿದೆ : ಅಸದುದ್ದೀನ್ ಉವೈಸಿ ಆರೋಪ

Update: 2025-09-24 20:01 IST

ಅಸದುದ್ದೀನ್ ಉವೈಸಿ | PC : PTI

ಕಿಶನಗಂಜ್(ಬಿಹಾರ),ಸೆ.24: ನರೇಂದ್ರ ಮೋದಿ ಸರಕಾರವು ಮುಸ್ಲಿಮರ ಮಸೀದಿಗಳು ಮತ್ತು ಇತರ ಪವಿತ್ರ ಸ್ಥಳಗಳನ್ನು ಕಿತ್ತುಕೊಳ್ಳಲು ವಕ್ಫ್(ತಿದ್ದುಪಡಿ) ಕಾಯ್ದೆಯನ್ನು ತಂದಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಆರೋಪಿಸಿದರು.

ಕಿಶನಗಂಜ್ ಜಿಲ್ಲೆಯ ಕೋಚಾಧಾಮನ್ ವಿಧಾನಸಭಾ ಕ್ಷೇತ್ರದಲ್ಲಿ ಮೂರು ದಿನಗಳ ‘ಸೀಮಾಂಚಲ ನ್ಯಾಯ ಯಾತ್ರೆ’ಗೆ ಚಾಲನೆ ನೀಡಿದ ಬಳಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಉವೈಸಿ, ಪ್ರಧಾನಿ ನರೇಂದ್ರ ಮೋದಿಯವರು ವಕ್ಫ್ ಮಸೂದೆಯನ್ನು ತಂದಿರುವುದು ಯಾವುದೇ ಪ್ರಾಮಾಣಿಕ ಉದ್ದೇಶದಿಂದಲ್ಲ, ಬದಲಾಗಿ ಮಸೀದಿಗಳು, ಈದ್ಗಾಗಳು ಮತ್ತು ಖಬರಸ್ತಾನ್‌ಗಳನ್ನು ಕಿತ್ತುಕೊಳ್ಳಲು. ಈ ಆಸ್ತಿಗಳು ಅಲ್ಲಾಹ್‌ನಿಗೆ ಸೇರಿದ್ದು, ಬೇರೆ ಯಾರಿಗೂ ಅಲ್ಲ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ಹೇಳಿದರು.

ದೇವರು ಇಚ್ಛಿಸಿದರೆ, ಮೋದಿ ಎಂದಿಗೂ ತನ್ನ ಅಪವಿತ್ರ ಉದ್ದೇಶಗಳಲ್ಲಿ ಯಶಸ್ವಿಯಾಗುವುದಿಲ್ಲ. ಜಗತ್ತು ಇರುವವರೆಗೂ ಮುಸ್ಲಿಮರು ತಮ್ಮ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಲೇ ಇರುತ್ತಾರೆ. ಅಲ್ಲಾಹ್‌ನಲ್ಲಿ ನಂಬಿಕೆಯುಳ್ಳವರು ಪವಿತ್ರವೆಂದು ಪರಿಗಣಿಸಿರುವ ಸ್ಥಳಗಳು ಬಿಜೆಪಿ-ಆರೆಸ್ಸೆಸ್ ವಶವಾಗುವುದಿಲ್ಲ ಎಂದರು.

ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡರಂಗದಂತಹ ಬಿಹಾರದಲ್ಲಿನ ಪ್ರತಿಪಕ್ಷಗಳ ವಿರುದ್ಧ ಪರೋಕ್ಷ ದಾಳಿಯನ್ನೂ ನಡೆಸಿದ ಉವೈಸಿ, ‘ಸ್ವಾತಂತ್ರ್ಯ ಲಭಿಸಿದಾಗಿನಿಂದಲೂ ದೇಶದ ಮುಸ್ಲಿಮರು ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಸುದೀರ್ಘ ಸಮಯದಿಂದ ಬಿಜೆಪಿಯು ಅಧಿಕಾರಕ್ಕೆ ಬರುವುದನ್ನು ತಡೆಯುವ ಹೆಸರಿನಲ್ಲಿ ನಮ್ಮ ಮತಗಳನ್ನು ಪಡೆದುಕೊಳ್ಳಲಾಗುತ್ತಿದೆ. ಆದರೆ ನಾವು ಕೂಲಿಗಳಂತೆ ಈ ಹೊರೆಯನ್ನು ಅನಿರ್ದಿಷ್ಟವಾಗಿ ನಮ್ಮ ಹೆಗಲುಗಳ ಮೆಲೆ ಹೊತ್ತುಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳುವ ಸಮಯವೀಗ ಬಂದಿದೆ ’ಎಂದು ಹೇಳಿದರು.

‘ನಮ್ಮ ಯುವಜನರು ಅನುಭವಿಸುತ್ತಿರುವ ಹತಾಶೆಯನ್ನು ನಾವು ಗಮನಿಸಬೇಕಿದೆ. ನಮ್ಮ ಹಿತಕ್ಕೆ ಅಗತ್ಯವಾಗಿರುವುದನ್ನು ನಾವು ಮಾಡಬೇಕಿದೆ. ಯಾವುದೋ ಪಕ್ಷವು ಅಧಿಕಾರವನ್ನು ಅನುಭವಿಸಲು ನಾವು ಇನ್ನು ಮುಂದೆ ನಮ್ಮ ಆಕಾಂಕ್ಷೆಗಳನ್ನು ತ್ಯಾಗ ಮಾಡುವುದಿಲ್ಲ’ ಎಂದೂ ಉವೈಸಿ ಹೇಳಿದರು.

ಬಿಹಾರದ ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ತನ್ನ ಬೆಂಬಲವನ್ನು ಹೆಚ್ಚಿಸಿಕೊಳ್ಳಲು ಎಐಎಂಐಎಂ ಸೀಮಾಂಚಲ ನ್ಯಾಯ ಯಾತ್ರೆಯನ್ನು ಹಮ್ಮಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News