×
Ad

ದೆಹಲಿ- ಗೋವಾ ವಿಮಾನ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ ವೇಳೆ ಪೈಲಟ್ ಹೇಳಿದ್ದೇನು?

Update: 2025-07-17 08:13 IST

PC: PTI

ಮುಂಬೈ: ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಗೆ ತೆರಳುತ್ತಿದ್ದ ಇಂಡಿಗೊ ವಿಮಾನ (6ಇ6271) ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗುವ ಮುನ್ನ ಪೈಲಟ್ "ಪಾನ್ ಪಾನ್ ಪಾನ್" ಎಂಬ ಸಂದೇಶವನ್ನು ರವಾನಿಸಿದ್ದಾಗಿ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೆಹಲಿಯಿಂದ ಗೋವಾಗೆ 191 ಮಂದಿಯನ್ನು ಕರೆದೊಯ್ಯುತ್ತಿದ್ದ ಎ320ನಿಯಾ ಏರ್‌ಬಸ್ ವಿಮಾನ ಎಂಜಿನ್ ಸಮಸ್ಯೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿತು. ರಾತ್ರಿ 9.53ಕ್ಕೆ ವಿಮಾನ ಸುರಕ್ಷಿತವಾಗಿ ಇಳಿದಿದೆ.

ಭುವನೇಶ್ವರದಿಂದ ಸುಮಾರು 100 ನಾಟಿಕಲ್ ಮೈಲು ಉತ್ತರದಲ್ಲಿ ಹಾರಾಡುತ್ತಿದ್ದ ವೇಳೆ ಎಂಜಿನ್ ನಂಬರ್ ವನ್ ನಲ್ಲಿ ಸಮಸ್ಯೆ ಕಂಡುಬಂದಿದೆ. ತಕ್ಷಣವೇ ಪೈಲಟ್ "ಪಾನ್ ಪಾನ್ ಪಾನ್" ಎಂಬ ಸಂದೇಶವನ್ನು ರವಾನಿಸಿದ್ದಾರೆ. (ಇದು ಜೀವ ಅಪಾಯ ಇಲ್ಲದ ತುರ್ತು ಸ್ಥಿತಿಯನ್ನು ಸಂಕೇತಿಸುವ ಸಂದೇಶವಾಗಿದೆ)

ತಾಂತ್ರಿಕ ದೋಷದಿಂದಾಗಿ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು ಎಂದು ಇಂಡಿಗೊ ಸ್ಪಷ್ಟಪಡಿಸಿದೆ. "ದೆಹಲಿಯಿಂದ ಗೋವಾದ ಮನೋಹರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ 6ಇ6271 ವಿಮಾನದಲ್ಲಿ ಜುಲೈ 16ರಂದು ತಾಂತ್ರಿಕ ದೋಷ ಕಾಣಿಸಿಕೊಂಡಿತು. ಸೂಕ್ತ ವಿಧಿವಿಧಾನಗಳನ್ನು ಅನುಸರಿಸಿ ವಿಮಾನವನ್ನು ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು" ಎಂದು ಇಂಡಿಗೊ ವಕ್ತಾರ ಹೇಳಿದ್ದಾರೆ.

ರಾತ್ರಿ 9.32ಕ್ಕೆ ವಿಮಾನವನ್ನು ಮುಂಬೈಗೆ ತಿರುಗಿಸಲು ಸಿಬ್ಬಂದಿ ಮನವಿ ಮಾಡಿಕೊಂಡಿದ್ದಾರೆ. ನಿಗದಿತ ಕಾರ್ಯಾಚರಣೆ ವಿಧಾನವನ್ನು ಅನುಸರಿಸಿ ವಿಮಾನ ನಿಲ್ದಾಣದಲ್ಲಿ ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ ಯಂತ್ರಗಳನ್ನು ಸಜ್ಜಾಗಿ ಇಡಲಾಗಿತ್ತು. ವಿಮಾನ 9.53ಕ್ಕೆ ಸುರಕ್ಷಿತವಾಗಿ ಇಳಿದಿದೆ ಎಂದು ಮೂಲಗಳು ವಿವರಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News