ವಸಾಹತುಶಾಹಿಯನ್ನು ಟೀಕಿಸುವ ಬಿಜೆಪಿ ನಾಯಕರ ಮಕ್ಕಳು ವ್ಯಾಸಂಗ ಮಾಡುತ್ತಿರುವುದೆಲ್ಲಿ?
ಸಾಮಾಜಿಕ ಮಾಧ್ಯಮದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾದ ಜವಾಹರ್ ಸರ್ಕಾರ್ ಅವರ ಪೋಸ್ಟ್
ಜವಾಹರ್ ಸರ್ಕಾರ್ |PC : PTI
ಹೊಸದಿಲ್ಲಿ: ವಸಾಹತುಶಾಹಿ ವ್ಯವಸ್ಥೆಯನ್ನು ವಿರೋಧಿಸುವ ಬಿಜೆಪಿ ನಾಯಕರ ಮಕ್ಕಳು ಎಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಿವೃತ್ತ ಐಎಎಸ್ ಅಧಿಕಾರಿ, ರಾಜ್ಯ ಸಭೆಯ ಮಾಜಿ ಸದಸ್ಯ ಜವಾಹರ್ ಸರ್ಕಾರ್, ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ, ಯಾವೆಲ್ಲ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬ ವಿಸ್ತೃತ ಪಟ್ಟಿಯನ್ನು ಹಂಚಿಕೊಳ್ಳುವ ಮೂಲಕ ಈ ಚರ್ಚೆ ಮತ್ತಷ್ಟು ಕಾವೇರುವಂತೆ ಮಾಡಿದ್ದಾರೆ.
ಅಮೇರಿಕ ಎಚ್ ಒನ್ ಬಿ ವೀಸಾಗೆ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸಿದ ಬಳಿಕ ಪ್ರಧಾನಿ ಮೋದಿ ನಾವು ವಿದೇಶವನ್ನು ಅವಲಂಬಿಸಬಾರದು , ಸ್ವಾವಲಂಬನೆಯೇ ಪರಿಹಾರ, ಸ್ವದೇಶೀ ವಸ್ತುಗಳನ್ನೇ ಖರೀದಿಸಬೇಕು ಎಂದೆಲ್ಲ ಹೇಳಿರುವಾಗಲೇ ಬಿಜೆಪಿ ಹಿರಿಯ ನಾಯಕರ ಮಕ್ಕಳು ವಿದೇಶದ ಪ್ರತಿಸ್ಥಿತ ವಿವಿಗಳಲ್ಲಿ ಕಲಿತಿರುವ ಮಾಹಿತಿ ಚರ್ಚೆಗೆ ಬಂದಿದೆ
ಜವಾಹರ್ ಸರ್ಕಾರ್ ಅವರು ಹಂಚಿಕೊಂಡಿರುವ ಪಟ್ಟಿಯ ಪ್ರಕಾರ,
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಪರಕಲಾ ವಾಂಗ್ಮಯಿ ಬ್ರಿಟನ್ ನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರದಲ್ಲಿ ಎಂಎ ಪದವಿ ಹಾಗೂ ಅಮೆರಿಕದ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ.
ಸಚಿವ ಪಿಯೂಷ್ ಗೋಯಲ್ ಅವರ ಪುತ್ರ ಧ್ರುವ್ ಗೋಯಲ್, ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಅರ್ಥಶಾಸ್ತ್ರ ಹಾಗೂ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಪಿಯೂಷ್ ಗೋಯಲ್ ಅವರ ಪುತ್ರಿ ರಾಧಿಕಾ ಗೋಯಲ್, ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ನಲ್ಲಿ ಪದವೀಧರೆಯಾಗಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ ಚೌಹಾಣ್, ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಎಂ ಪದವಿ ಪೂರೈಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ನೀರಜ್ ಸಿಂಗ್, ಬ್ರಿಟನ್ ನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪೂರೈಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಪುತ್ರ ಧ್ರುವ ಜೈಶಂಕರ್, ಅಮೆರಿಕದ ಮ್ಯಾಕಲೆಸ್ಟರ್ ಕಾಲೇಜಿನಲ್ಲಿ ಪದವಿ ಹಾಗೂ ಜಾರ್ಜ್ ಟನ್ ವಿಶ್ವವಿದ್ಯಾಲಯದಿಂದ ಸೆಕ್ಯುರಿಟಿ ಸ್ಟಡೀಸ್ ವಿಷಯದಲ್ಲಿ ಎಂಬಿಎ ಪದವಿ ಪೂರೈಸಿದ್ದಾರೆ. ಎಸ್.ಜೈಶಂಕರ್ ಅವರ ಮತ್ತೊಬ್ಬ ಪುತ್ರಿ ಮೇಧಾ ಜೈಶಂಕರ್, ಅಮೆರಿಕದ ಡೆನಿಸನ್ ವಿಶ್ವವಿದ್ಯಾಲಯದಿಂದ ಸಿನಿಮಾ ವಿಷಯದಲ್ಲಿ ಬಿಎ ಪದವೀಧರೆಯಾಗಿದ್ದಾರೆ.
ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯವರ ಮಲ ಪುತ್ರಿ ಶಾನೆಲ್ಲೆ ಇರಾನಿ ಅಮೆರಿಕದ ಜಾರ್ಜ್ ಟೌನ್ ವಿಶ್ವವಿದ್ಯಾಲಯದ ಕಾನೂನು ಕೇಂದ್ರದಿಂದ ಎಲ್ಎಲ್ಎಂ ಪದವೀಧರೆಯಾಗಿದ್ದಾರೆ.
ಕೇಂದ್ರದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರ ಮಹಾರ್ಯಮನ್ ಸಿಂಧಿಯಾ, ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪೂರೈಸಿದ್ದಾರೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪುತ್ರಿ ತಿಲೋತ್ತಮ ಪುರಿ, ಬ್ರಿಟನ್ ನ ವಾರ್ವಿಕ್ ವಿಶ್ವವಿದ್ಯಾಲಯದಿಂದ ಬಿಎ ಹಾಗೂ ಲಂಡನ್ ನ ಯುನಿವರ್ಸಿಟಿ ಕಾಲೇಜಿನಿಂದ ಎಲ್ಎಲ್ಎಂ ಪದವಿ ಪಡೆದಿದ್ದಾರೆ.
ಕೇಂದ್ರ ಸಚಿವ ಗಜೇಂದ್ರ ಶೆಖಾವತ್ ಅವರ ಪುತ್ರಿ ಸುಹಾಸಿನಿ ಶೆಖಾವತ್, ಬ್ರಿಟನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಅಡ್ವಾನ್ಸ್ ಲೀಡರ್ಶಿಪ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವ್ಡೇಕರ್ ಅವರ ಪುತ್ರಿ ಅಪೂರ್ವ ಜಾವ್ಡೇಕರ್, ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.
ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಅವರ ಪುತ್ರ ಆದಿತ್ಯ ಶಂಕರ್, ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಎಲ್ಎಲ್ಎಂ ಪದವೀಧರರಾಗಿದ್ದಾರೆ.
ಕೇಂದ್ರದ ಮಾಜಿ ಸಚಿವ ಹರ್ಷವರ್ಧನ್ ಅವರ ಪುತ್ರ ಸಚಿನ್, ಆಸ್ಟ್ರೇಲಿಯಾದ ಮೆಲ್ಬೋರ್ನ್ ನ ಮೊನಾಶ್ ವಿಶ್ವವಿದ್ಯಾಲಯದಲ್ಲಿ ಫೈನಾನ್ಸ್ ಅಂಡ್ ಅಕೌಂಟ್ಸ್ ನಲ್ಲಿ ಕೋರ್ಸ್ ಮಾಡಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಜಿತೇಂದ್ರ ಸಿಂಗ್ ಅವರ ಪುತ್ರ ಅರುಣೋದಯ್ ಸಿಂಗ್, ಬ್ರಿಟನ್ ನ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಇಕನಾಮಿಕ್ ಡೆವಲಪ್ಮೆಂಟ್ ವಿಷಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡಿದ್ದಾರೆ.
ಬಿಜೆಪಿ ನಾಯಕ ಸಂಜಯ್ ಧೊತ್ರೆ ಅವರ ಪುತ್ರ ನಕುಲ್ ಧೋತ್ರೆ,ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ.
ಕೇಂದ್ರದ ಮಾಜಿ ಸಚಿವೆ ವಸುಂಧರಾ ರಾಜೆ ಅವರ ಪುತ್ರ ದುಷ್ಯಂತ್ ಸಿಂಗ್ ಅವರು ಅಮೆರಿಕದ ಜಾನ್ಸನ್ ಆ್ಯಂಡ್ ವೇಲ್ಸ್ ವಿಶ್ವವಿದ್ಯಾಲಯದಿಂದ ಹೊಟೇಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆದಿದ್ದಾರೆ.
ಬಿಜೆಪಿಯ ಹಿರಿಯ ನಾಯಕಿ ಹರ್ ಸಿಮ್ರತ್ ಕೌರ್ ಬಾದಲ್ ಅವರ ಪುತ್ರಿ (ಹೆಸರು ಉಲ್ಲೇಖಿಸಿಲ್ಲ) ಬ್ರಿಟನ್ ನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಪದವೀಧರೆಯಾಗಿದ್ದಾರೆ.
ಈ ಪಟ್ಟಿಯನ್ನು ಹಂಚಿಕೊಂಡಿರುವ ಜವಾಹರ್ ಸರ್ಕಾರ್, “ಬಿಜೆಪಿಯು ಎಲ್ಲ ಸಮಯದಲ್ಲೂ ಪಾಶ್ಚಿಮಾತ್ಯ ಪ್ರಾಬಲ್ಯ ಹಾಗೂ ವಸಾಹತುಶಾಹಿಯನ್ನು ನಿಂದಿಸುತ್ತಲೇ ಇರುತ್ತದೆ! ಆದರೆ, ಬಿಜೆಪಿಯ ನಾಯಕರ ಎಲ್ಲ ಮಕ್ಕಳೂ ದುಬಾರಿ ಶುಲ್ಕದೊಂದಿಗೆ ಹೇಗೆ ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬುದನ್ನು ನೋಡಿ. 11 ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿಯು ಸಂಪೂರ್ಣವಾಗಿ ಬೂಟಾಟಿಕೆ ಪ್ರದರ್ಶಿಸಿದೆ. ಆದರೆ, ಬಡತನ, ನಿರುದ್ಯೋಗದಲ್ಲಿ ಬದುಕುತ್ತಿರುವ ಮಕ್ಕಳ ಮೂರ್ಖ ಭಕ್ತ ಪೋಷಕರಿಗೆ ಇದು ಕಾಣುತ್ತಿಲ್ಲ!” ಎಂದು ವ್ಯಂಗ್ಯವಾಡಿದ್ದಾರೆ.
ಜವಹರ್ ಸರ್ಕಾರ್ ಅವರ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಎಕ್ಸ್ ನಲ್ಲಿನ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಧೈರ್ಯ ಉಪಾಧ್ಯಾಯ ಎಂಬವರು, ರಾಹುಲ್ ಗಾಂಧಿ ಓದಿದ್ದು ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.
"ದಯವಿಟ್ಟು ಉಳಿದ ಎಲ್ಲ ಪಕ್ಷಗಳ ನಾಯಕರ ಪಟ್ಟಿಯನ್ನು ಕಳುಹಿಸಿ. ಅವರ ಮಕ್ಕಳು ವಿದೇಶದಲ್ಲಿ ಎಲ್ಲಿ ಓದುತ್ತಿದ್ದಾರೆ? ಓದಿದ್ದಾರೆ ಅಥವಾ ಎಲ್ಲಿ ವಾಸಿಸುತ್ತಿದ್ದಾರೆ? ಇಲ್ಲದಿದ್ದರೆ ನಾನೇ ಪೋಸ್ಟ್ ಮಾಡಬೇಕೇ? ನಿರ್ದಿಷ್ಟವಾಗಿ ಮಾತ್ರ ಪೋಸ್ಟ್ ಮಾಡಬೇಡಿ", ಎಂದು ಧರ್ಮೇಂದ್ರ ಸಿಂಗ್ ಎಂಬವರು ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಮತ್ತು ನಿಮ್ಮ ನಾಯಕರ ಪುತ್ರರು/ಪುತ್ರಿಯರ ಕಥೆ ಏನು? ರಾಜಕಾರಣಿಗಳು ಮಾತ್ರವಲ್ಲ. ಎಲ್ಲಾ ಐಎಎಸ್ ಅಧಿಕಾರಿಗಳು, ಎಲ್ಲಾ ಹಿರಿಯ ಅಧಿಕಾರಿಗಳ ಮಕ್ಕಳು ಭಾರತದ ಹೊರಗೆ ಇದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.