×
Ad

ಗುಜರಾತ್ | ಕಾಂಗ್ರೆಸ್ ಕುಟುಂಬದಿಂದ ಬಂದ ರಿವಾಬಾ ಬಿಜೆಪಿ ಸರ್ಕಾರದಲ್ಲಿ ಸಚಿವೆ

Update: 2025-10-17 22:38 IST

ರಿವಾಬಾ ಜಡೇಜಾ |Photo Credit : X

ಅಹಮದಾಬಾದ್: ಗುಜರಾತ್ ಸಂಪುಟ ಪುನರ್‌ರಚನೆಯಲ್ಲಿ ಎಲ್ಲರ ಗಮನ ಸೆಳೆದ ಹೆಸರು, ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ. ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾದ ಮೂರೇ ವರ್ಷಗಳಲ್ಲಿ ಅವರು ಗುಜರಾತ್ ಸಚಿವ ಸಂಪುಟದ ಮೂವರು ಮಹಿಳಾ ಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ.

ರಾಜ್‌ಕೋಟ್‌ನ ಗಲ್ಲಿಯಿಂದ ಗುಜರಾತ್ ಸಂಪುಟದವರೆಗೆ ಅವರ ಈ ಪಯಣವೇ ಒಂದು ಕುತೂಹಲಕಾರಿ ಕಥೆ!

ರಿವಾಬಾ ಅವರ ಈ ರಾಜಕೀಯವು ಚರ್ಚೆಗೆ ಗ್ರಾಸವಾಗಲು ಮುಖ್ಯ ಕಾರಣ ಅವರ ಕುಟುಂಬದ ರಾಜಕೀಯ ಹಿನ್ನೆಲೆ. ರಿವಾಬಾ ಅವರ ಚಿಕ್ಕಪ್ಪ ಹರಿ ಸಿಂಗ್ ಸೋಲಂಕಿ ಅವರು ರಾಜ್‌ಕೋಟ್‌ನ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದರೆ, ಅವರ ಪತಿ ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಜಡೇಜಾ ಅವರು ಜಾಮ್‌ನಗರ ಕಾಂಗ್ರೆಸ್ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದಾರೆ.

2022ರ ವಿಧಾನಸಭಾ ಚುನಾವಣೆಯಂತೂ ಜಡೇಜಾ ಕುಟುಂಬದಲ್ಲಿ 'ರಾಜಕೀಯ ಡ್ರಾಮಾ'ಕ್ಕೆ ಸಾಕ್ಷಿಯಾಗಿತ್ತು. ಬಿಜೆಪಿ ಅಭ್ಯರ್ಥಿ ರಿವಾಬಾ ಅವರ ವಿರುದ್ಧ, ನೈನಾ ಜಡೇಜಾ ಅವರು ತಮ್ಮ ಪಕ್ಷವಾದ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದರು! ಆದರೆ, ರವೀಂದ್ರ ಜಡೇಜಾ ತಮ್ಮ ಪತ್ನಿ ರಿವಾಬಾ ಪರ ಪ್ರಚಾರ ಮಾಡಿ ಗೆಲುವಿಗೆ ನೆರವಾದರು. ಕಾಂಗ್ರೆಸ್ ಹಿನ್ನೆಲೆಯ ಕುಟುಂಬದಿಂದ ಬಂದರೂ, ಬಿಜೆಪಿ ಸಚಿವ ಸಂಪುಟದಲ್ಲಿ ಇಂದು ಸ್ಥಾನ ಪಡೆದಿರುವ ರಿವಾಬಾ ಅವರ ಸಾಧನೆ ಈಗ ಹೈಲೈಟ್ ಆಗುತ್ತಿದೆ.

34 ವರ್ಷದ ರಿವಾಬಾ ಅವರ ಮೂಲ ಕನಸು ಅಧಿಕಾರಿಯಾಗುವುದು ಆಗಿತ್ತು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರೆ ರಿವಾಬಾ ಅವರು 2019ರ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ನಂತರ ರಾಜಕೀಯದಲ್ಲಿ ವೇಗವಾಗಿ ಏರಿದರು.

2022ರ ಚುನಾವಣೆಯ ಸಮಯದಲ್ಲಿ 100 ಕೋಟಿ ರೂ. ಆಸ್ತಿ ಘೋಷಿಸಿ, ಗುಜರಾತ್‌ನ ಶ್ರೀಮಂತ ಶಾಸಕಿಯರಲ್ಲಿ ಒಬ್ಬರಾಗಿಯೂ ಅವರು ಗಮನ ಸೆಳೆದಿದ್ದರು. ಸ್ಥಳೀಯ ಚುನಾವಣೆಗಳು ಮತ್ತು 2027ರ ವಿಧಾನಸಭಾ ಚುನಾವಣೆಗಳ ಮುನ್ನ ಯುವ ಮುಖಗಳಿಗೆ ಅವಕಾಶ ನೀಡುವ ಬಿಜೆಪಿಯ ತಂತ್ರದ ಭಾಗವಾಗಿ ಜಾಮ್‌ನಗರ ಉತ್ತರ ಶಾಸಕಿಯಾಗಿರುವ ರಿವಾಬಾ ಅವರಿಗೆ ಸಚಿವ ಸ್ಥಾನ ಒಲಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News