ಬಿಹಾರ: ನಿತೀಶ್ ಸಿಎಂ ಎಂದು ಟ್ವೀಟ್ ಮಾಡಿ ಅಳಿಸಿದ ಜೆಡಿ(ಯು)!
ಮಹಾರಾಷ್ಟ್ರ ಮಾದರಿ ಪಾಲಿಸುವುದೇ ಬಿಜೆಪಿ?
ನಿತೀಶ್ ಕುಮಾರ್ (File Photo: PTI)
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಮುನ್ನಡೆ ಸಾಧಿಸಿದ್ದು, ಮುಂದಿನ ಸರ್ಕಾರದ ನಾಯಕತ್ವದ ಬಗ್ಗೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳು ಶುರುವಾಗಿದೆ. ಜೆಡಿ(ಯು) ಶುಕ್ರವಾರ ಎಕ್ಸ್‌ನಲ್ಲಿ ಪ್ರಕಟಿಸಿದ, ನಂತರ ಕೆಲವೇ ನಿಮಿಷಗಳಲ್ಲಿ ಅಳಿಸಲ್ಪಟ್ಟ ಪೋಸ್ಟ್ ಈ ಚರ್ಚೆಗೆ ಕಾರಣವಾಗಿದೆ.
ಜೆಡಿ(ಯು) ತನ್ನ ಅಧಿಕೃತ ಖಾತೆಯಲ್ಲಿ, “ನಿತೀಶ್ ಕುಮಾರ್ ಅವರಿಗೆ ಯಾರೂ ಸಾಟಿಯಿಲ್ಲ. ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದರು, ಮುಂದೆಯೂ ಅವರು ಮುಂದುವರಿಯುತ್ತಾರೆ” ಎಂದು ಪೋಸ್ಟ್ ಮಾಡಿತ್ತು. ಆದರೆ ಈ ಸಂದೇಶವನ್ನು ತಕ್ಷಣವೇ ಅಳಿಸಿ ಹಾಕಲಾಗಿದೆ. ಇದು ಪಕ್ಷದೊಳಗಿನ ಸಮಾಲೋಚನೆಗಳು ಹಾಗೂ ಎನ್‌ಡಿಎ ಸಮೀಕರಣಗಳ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಚುನಾವಣೆಗೆ ಮುನ್ನ, ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಸ್ಪರ್ಧಿಸುತ್ತೇವೆ ಎಂದು ಬಿಜೆಪಿ ಘೋಷಿಸಿದ್ದರೂ, ಫಲಿತಾಂಶ ಪ್ರಕಟವಾದ ಬಳಿಕ ಅವರ 10ನೇ ಅವಧಿಯ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಲಾಗಿಲ್ಲ.
ಈ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ ದಾಖಲೆಯ ಪ್ರದರ್ಶನ ನೀಡಿದ್ದು, ಸ್ಪರ್ಧಿಸಿದ 101 ಸ್ಥಾನಗಳಲ್ಲಿ 90 ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿದೆ. ಜೆಡಿ(ಯು) ಕೂಡ ಉತ್ತಮ ಸಾಧನೆ ಮಾಡಿದರೂ, ಬಿಜೆಪಿ ದಾಖಲೆಯ ಸಾಧನೆಗೆ ಹೊಂದಿಕೆಯಾಗಿಲ್ಲ. ಇದರಿಂದ ಮುಂದಿನ ಸರ್ಕಾರ ರಚನೆಯಲ್ಲಿ ಬಿಜೆಪಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ರಾಜಕೀಯ ಅಂದಾಜುಗಳು ಬಲವಾಗಿವೆ.
ಈ ಬೆಳವಣಿಗೆಗಳ ಮಧ್ಯೆ, 2024ರ ಮಹಾರಾಷ್ಟ್ರ ಮಾದರಿಯೂ ಮತ್ತೆ ಚರ್ಚೆಗೆ ಬಂದಿದೆ. ಅಲ್ಲಿ ಚುನಾವಣೆಯ ಸಮಯದಲ್ಲಿ ಏಕನಾಥ್ ಶಿಂದೆ ಮುಖ್ಯಮಂತ್ರಿಯಾಗಿದ್ದರೂ, ಫಲಿತಾಂಶದ ನಂತರ ಬಿಜೆಪಿ ತನ್ನ ನಾಯಕ ದೇವೇಂದ್ರ ಫಡ್ನವೀಸ್ ಅವರಿಗೆ ಸಿಎಂ ಸ್ಥಾನ ಒದಗಿಸಿತ್ತು. ಬಿಹಾರದಲ್ಲೂ ಇದೇ ರೀತಿಯ ಬದಲಾವಣೆ ಸಂಭವಿಸಬಹುದೇ ಎಂಬುದರ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿದೆ.