×
Ad

44 ಬಾರಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡರೂ ಒಂದೇ ಒಂದು ಬಾರಿಯೂ ಮಣಿಪುರಕ್ಕೆ ಭೇಟಿ ನೀಡಲಿಲ್ಲವೇಕೆ?: ಪ್ರಧಾನಿ ಮೋದಿಗೆ ಖರ್ಗೆ ಪ್ರಶ್ನೆ

Update: 2025-05-03 20:23 IST

ಮಲ್ಲಿಕಾರ್ಜುನ ಖರ್ಗೆ | PC : PTI 

ಹೊಸದಿಲ್ಲಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡು ಎರಡು ವರ್ಷಗಳೇ ಆದರೂ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡದೆ ʼರಾಜಧರ್ಮʼವನ್ನು ಎತ್ತಿ ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿನ ಬಿಕ್ಕಟ್ಟು ಇನ್ನೂ ಮುಂದುವರಿದಿದ್ದು, ಪ್ರಧಾನಿ ನರೇಂದ್ರ ಮೋದಿ ಕಳೆದ ಎರಡು ವರ್ಷಗಳಿಂದ ಈ ನೆಲಕ್ಕೆ ಕಾಲಿಟ್ಟಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಮೇ 3, 2023ರಂದು ಪ್ರಾರಂಭಗೊಂಡ ಮಣಿಪುರ ಜನಾಂಗೀಯ ಹಿಂಸಾಚಾರವು ಇಂದಿಗೂ ಮುಂದುವರಿದಿದೆ ಎಂದೂ ಅವರು ಆರೋಪಿಸಿದ್ದಾರೆ.

ಕೇವಲ ಎರಡು ದಿನಗಳ ಹಿಂದಷ್ಟೆ ತಮೆಂಗ್ಲಾಂಗ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ 25 ಮಂದಿ ಗಾಯಗೊಂಡಿದ್ದಾರೆ ಎಂಬುದರತ್ತಲೂ ಅವರು ಬೊಟ್ಟು ಮಾಡಿದ್ದಾರೆ.

ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರದಲ್ಲಿ ಈವರೆಗೆ 260 ಮಂದಿ ಮೃತಪಟ್ಟಿದ್ದು, 68,000 ಮಂದಿ ನಿರ್ವಸತಿಗರಾಗಿದ್ದಾರೆ ಹಾಗೂ ಸಾವಿರಾರು ಮಂದಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

"ನರೇಂದ್ರ ಮೋದಿಯವರೆ ಮಣಿಪುರವಿನ್ನೂ ನಿಮ್ಮ ಭೇಟಿಗೆ ಕಾಯುತ್ತಾ, ಶಾಂತಿ ಮತ್ತು ಸಹಜತೆಗೆ ಮರಳುವ ನಿರೀಕ್ಷೆಯಲ್ಲಿರುವಾಗ, ನಾವು ನಿಮಗೆ ಮೂರು ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ: ಮೊದಲನೆಯದು:, ಜನವರಿ 2022ರಲ್ಲಿ ನೀವು ಚುನಾವಣಾ ಸಮಾವೇಶದಲ್ಲಿ ಭಾಗವಹಿಸಲು ಮಣಿಪುರಕ್ಕೆ ಭೇಟಿ ನೀಡಿದ ನಂತರದಿಂದ ಇಲ್ಲಿಯವರೆಗೆ, 44 ಬಾರಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದೀರಿ ಹಾಗೂ 250 ಬಾರಿ ದೇಶೀಯ ಪ್ರವಾಸ ಕೈಗೊಂಡಿದ್ದೀರಿ. ಹೀಗಿದ್ದೂ ನೀವು ಮಣಿಪುರದಲ್ಲಿ ಒಂದು ಕ್ಷಣವನ್ನೂ ಕಳೆದಿಲ್ಲ. ಮಣಿಪುರ ಜನತೆಯೆಡೆಗೆ ಈ ತಾತ್ಸಾರ ಹಾಗೂ ನಿರ್ಲಕ್ಷ್ಯವೇಕೆ? ರಾಜಕೀಯ ಉತ್ತರದಾಯಿತ್ವವೆಲ್ಲಿದೆ?" ಎಂದು ಅವರು ಪ್ರಶ್ನಿಸಿದ್ದಾರೆ.

"ಎರಡನೆಯದಾಗಿ, ಮಣಿಪುರ ಜನತೆ ರಾಷ್ಟ್ರಪತಿ ಆಡಳಿತಕ್ಕಾಗಿ ಆಗ್ರಹಿಸಿದರೂ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನೇಕೆ ಹೇರಲಿಲ್ಲ?" ಎಂದು ಅವರು ಪ್ರಶ್ನಿಸಿದ್ದಾರೆ.

"ಮೂರನೆಯದಾಗಿ, ಮಣಿಪುರ ಜನತೆಗೆ ಸಾಂವಿಧಾನಿಕ ಭದ್ರತೆ ಹಾಗೂ ಸುರಕ್ಷತೆ ನೀಡುವಲ್ಲಿ ಡಬಲ್ ಎಂಜಿನ್ ಸರಕಾರ ವಿಫಲವಾಗಿದ್ದೇಕೆ? ನೀವು ಮೊದಲೇ ಏಕೆ ಮುಖ್ಯಮಂತ್ರಿಯನ್ನು ವಜಾಗೊಳಿಸಲಿಲ್ಲ,?" ಎಂದು ಅವರು ಸರಣಿ ಪ್ರಶ್ನೆಗಳನ್ನು ಎಸೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News