×
Ad

ಕುಂಭಮೇಳಕ್ಕೆ ಕರೆದೊಯ್ದು ಪತ್ನಿಯ ಹತ್ಯೆ; ಪತಿಯ ಬಂಧನ

Update: 2025-02-23 07:45 IST

ಹತ್ಯೆಗೂ ಮೊದಲು ಸೆಲ್ಫಿ ವೀಡಿಯೋ ಮಾಡಿಕೊಂಡಿದ್ದ ಆರೋಪಿ ಅಶೋಕ್ ಕುಮಾರ್ PC: screengrab/ x.com/DainikBhaskar

ಪ್ರಯಾಗ್ ರಾಜ್: ಮಹಾಕುಂಭ ಮೇಳದ ಸಂದರ್ಭದಲ್ಲಿ ಸಂಗಮ ನಗರದಲ್ಲಿ ಪತ್ನಿಯನ್ನು ಕೊಂದು, ಆಕೆ ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ ದೆಹಲಿಯ ವ್ಯಕ್ತಿಯೊಬ್ಬನನ್ನು ಇಲ್ಲಿನ ಬೈರಾನಾ ಪ್ರದೇಶದಲ್ಲಿ ಬಂಧಿಸಲಾಗಿದೆ.

ಆರೋಪಿ ಅಶೋಕ್ ಕುಮಾರ್ (48) ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ವಾಸವಿದ್ದ. ಇದೀಗ ಆತನ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ತಿರುಚಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಪತಿಯ ವಿವಾಹೇತರ ಸಂಬಂಧವನ್ನು ಆಕ್ಷೇಪಿಸಿದ್ದ ಪತ್ನಿಯ ಜತೆ ಈತನ ಸಂಬಂಧ ಹಳಸಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿಯ ಕೊಲೆಗೆ ಸಂಚು ರೂಪಿಸಿ ಕುಂಭಮೇಳವನ್ನು ಉತ್ತಮ ಅವಕಾಶ ಎಂದು ಆರೋಪಿ ಕಂಡುಕೊಂಡಿದ್ದಾಗಿ ಡಿಸಿಪಿ ಅಶೋಕ್ ಭಾರ್ತಿ ಹೇಳಿದ್ದಾರೆ. ದೆಹಲಿ ನಗರ ನಿಗಮದಲ್ಲಿ ನೈರ್ಮಲ್ಯ ಕಾರ್ಮಿಕನಾಗಿರುವ ಆರೋಪಿ, ತನ್ನ ಕುಂಭಮೇಳ ಯಾತ್ರೆಯ ಹಲವು ವಿಡಿಯೊಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಪ್ರಯಾಗ್ ರಾಜ್ ನಲ್ಲಿ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪತ್ನಿ ಕಳೆದುಹೋದ ಬಗ್ಗೆ ದೂರು ನೀಡಿ ಬಳಿಕ ತಲೆ ಮರೆಸಿಕೊಂಡಿದ್ದ.

ಕಳೆದ ಮಂಗಳವಾರ ದೆಹಲಿಯಿಂದ ಪ್ರಯಾಗ್ ರಾಜ್ ಗೆ ಈ ದಂಪತಿ ಆಗಮಿಸಿದ್ದು, ಅಜಾತ್ ನಗರ ಮತ್ತು ಕೆಟ್ವಾನದಲ್ಲಿ ಬಾಡಿಗೆ ಕೊಠಡಿ ಪಡೆದಿದ್ದ. ಆದರೆ ತಮ್ಮ ಗುರುತಿನ ಪುರಾವೆ ನೀಡಿರಲಿಲ್ಲ. ಮರುದಿನ ಬೆಳಿಗ್ಗೆ ಮಹಿಳೆಯೊಬ್ಬರ ದೇಹ ಬಾತ್ರೂಂನಲ್ಲಿ ಪತ್ತೆಯಾಗಿತ್ತು. ಆದರೆ ಅಶೋಕ್ ಕುಮಾರ್ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಮೃತ ಮಹಿಳೆಯ ಸಹೋದರ ಪ್ರವೇಶ್ ಕುಮಾರ್ ಮತ್ತು ಆಕೆಯ ಮಕ್ಕಳ ಸಹಾಯದಿಂದ ಮಹಿಳೆಯ ಗುರುತು ಪತ್ತೆ ಮಾಡಿದ್ದರು. ಆಕೆಯನ್ನು ಮೀನಾಕ್ಷಿ ಎಂದು ಗುರುತಿಸಲಾಗಿದೆ. ಕುಟುಂಬ ಸದಸ್ಯರಿಂದ ಮಾಹಿತಿ ಪಡೆದ ಪೊಲೀಸರು, ದಂಪತಿಯ ಸಂಬಂಧ ಹಳಸಿರುವ ಮಾಹಿತಿ ಪಡೆದರು. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ ಕತ್ತು ಸೀಳಿ ಪತ್ನಿಯ ಹತ್ಯೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡ ಎಂದು ಪೊಲೀಸರು ಹೇಳಿದ್ದಾರೆ. ಚಾಕುವಿನಿಂದ ಪತ್ನಿಯನ್ನು ಹತ್ಯೆ ಮಾಡಿ ರಕ್ತಸಿಕ್ತ ಬಟ್ಟೆಗಳನ್ನು ಕಸದ ತೊಟ್ಟಿಗೆ ಎಸೆದು ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News